ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿಯ ಬಂಧನವಾಗಿದೆ. ತೌಫಿಲ್ ಎಂಬವನನ್ನು ಎನ್ಐಎ ಬಂಧಿಸಿದ್ದು, ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಬಂಧಿಸಲಾಗಿದೆ.
ಎನ್ಐಎ ಅಧಿಕಾರಿಗಳಿಗೆ ದಾಸರಹಳ್ಳಿಯಲ್ಲಿ ತೌಫಿಲ್ ಇರೋ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ತೌಫಿಲ್ ಪತ್ತೆಗೆ ಎನ್ಐಎ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಮೊದಲಿಗೆ ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಇಬ್ಬರು ಅಧಿಕಾರಿಗಳು ಹೋಗಿದ್ದರು.
ಈ ವೇಳೆ ತೌಫಿಲ್ ಮನೆಯಲ್ಲಿ ಮಟನ್ ಕಟ್ ಮಾಡುತ್ತಿದ್ದನು. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಮೃತಹಳ್ಳಿಯ ಮಾರುತಿ ಲೇಔಟ್ ನ ದಾಸರಹಳ್ಳಿಯಲ್ಲಿರುವ ನಂಜುಂಡಪ್ಪ ಎಂಬುವರ ಮನೆಯಲ್ಲಿ ಸುಮಾರು ಐದಾರು ತಿಂಗಳಿಂದ ಬಾಡಿಗೆಗೆ ವಾಸವಿದ್ದ ತೌಫಿಲ್, ಯಾರ ಜೊತೆಗೂ ಸೇರದೆ ಒಬ್ಬನೇ ಇರುತ್ತಿದ್ದ.
ಮೂರು ಅಂತಸ್ತಿನ ಕಟ್ಟಡದಲ್ಲಿ ಮೊದಲನೇ ಮಹಡಿಯಲ್ಲಿ ವಾಸವಿದ್ದ ಎಂಬುದು ಎನ್ಐಎ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.