ಮಂಡ್ಯ : ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ, ರಾಜಕೀಯದ ಸಹವಾಸಕ್ಕೆ ಹೋಗಬೇಡ ಅಂತ ನಾನೇ ಹೇಳಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ರಾಜಕೀಯ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ನಿಖಿಲ್ ಗೆ ಸಲಹೆ ನೀಡಿದ್ದೇನೆ. ಅವನು ಸಿನಿಮಾದತ್ತ ಮುಖ ಮಾಡಿದ್ದಾನೆ. ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ನಿಖಿಲ್ ಎರಡು ಬಾರಿ ಚುನಾವಣೆಗಳಲ್ಲಿ ಸೋತಿದ್ದಾನೆ. ಮಂಡ್ಯ ಎಂಪಿ ಎಲೆಕ್ಷನ್ ಗೆ ನಿಲ್ಲುವಾಗಲೂ ನಾನು ಬೇಡ ಅಂದಿದ್ದೆ. ನಿಖಿಲ್ ಕೂಡ ಮಂಡ್ಯದಲ್ಲಿ ನಿಲ್ಲಲು ತಯಾರಿರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ. ಸೋಲು ಗೆಲುವು ಇದ್ದೇ ಇರುತ್ತೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.
ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ : ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನಿದೆ ಅದಕ್ಕೆ ತಲೆ ಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡ ಅಂತ ಹೇಳಿದ್ದೇನೆ. ಮುಂದೆ ನೋಡೋಣ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದಿದ್ದೇನೆ. ಭಗವಂತ ನಿಖಿಲ್‌ಗೆ ಒಂದು ಕಲೆ ಕೊಟ್ಟಿದ್ದಾನೆ. ಆ ಕಲೆಯಲ್ಲಿ ಮುಂದುವರೆಯಪ್ಪಾ ಅಂತ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಆತ ಚುನಾವಣೆಗೆ ನಿಲ್ಲಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ : ಲೋಕಸಭೆ ಚುನಾವಣೆಗೆ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಬೇಕು ಎಂಬ ಅಭಿಪ್ರಾಯ ಇದೆ. ಯಾರೊಂದಿಗೂ ಮೈತ್ರಿ ಮಾಡಲ್ಲ. ನಾನು ಮೈತ್ರಿ ಮಾಡಿಕೊಂಡರೆ, ಮೈತ್ರಿ ಮಾಡಿಕೊಳ್ಳದ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಏನು ಮಾಡಬೇಕು?. ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಏನು ಅನುಕೂಲ ಆಯ್ತು ಗೊತ್ತಿದೆ. ಕಾಂಗ್ರೆಸ್ ಕುತ್ತಿಗೆ ಕೊಯ್ಯುವ ಕೆಲಸ ಮಾಡಿದೆ. ಮೈತ್ರಿಯಿಂದ ನನ್ನ ಕಾರ್ಯಕರ್ತರು ಬಲಿಪಶುಗಳು ಆಗಬಾರದು. ಮೈತ್ರಿ ಆಗದೇ ಇದ್ದಿದ್ರೆ ಮಂಡ್ಯದಲ್ಲಿ ಸೋಲುತ್ತಿರಲಿಲ್ಲ. ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂದುಕೊಂಡಿದ್ದೇವೆ. 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ನಾನು ಹೇಳಲ್ಲ, ನಾಲ್ಕೈದು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.