ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಎದುರು 10,715 ಮತಗಳ ಅಂತರದಿಂದ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಸೋಲನ್ನು ಅನುಭವಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿ, ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್ ಬರೆದುಕೊಂಡಿದ್ದಾರೆ. ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು ಎಂದಿದ್ದಾರೆ. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ ಎಂದು ನಿಖಿಲ್ ಬರೆದುಕೊಂಡಿದ್ದಾರೆ.


ಅಂದಹಾಗೆ ರಾಮನಗರ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಮೂರರಲ್ಲಿ ಸೋತಿದೆ. ಸೋತವರಲ್ಲಿ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಮುಖ್ಯಸ್ಥ ಎಚ್.ಡಿ. ದೇವೇಗೌಡರ ಮೊಮ್ಮಗ ನಟ ನಿಖಿಲ್ ಕುಮಾರಸ್ವಾಮಿ ಕೂಡ ಇದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿಜಯ ಸಾಧಿಸಿದ್ದಾರೆ.
ರಾಮನಗರದಲ್ಲಿ ನಿಖಿಲ್ ಸೋಲಿನ ಬಗ್ಗೆ ಮತದಾರರು ತಾಯಿ ಅನಿತಾ ಕುಮಾರಸ್ವಾಮಿಯತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಏನೂ ಮಾಡಿಲ್ಲ ಮತ್ತು ಮತದಾರರಿಗೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಪುತ್ರ ನಿಖಿಲ್‌ಗೆ ಮತ ಹಾಕದೆ ಮತದಾರರು ಆಕೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.