ಬೆಂಗಳೂರು : ‘ದೆಹಲಿಯ ರಾಜಕೀಯ ಪ್ರಮುಖರಿಗೆ ನನ್ನ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ’ ಎಂದು ತಮ್ಮದೇ ಸಮುದಾಯದ ನಾಯಕನ ವಿರುದ್ಧ ಆದಿಚುಂಚನಗಿರಿಯ ಡಾ. ನಿರ್ಮಲಾನಂದ ಸ್ವಾಮೀಜಿ ಅಸಮಾಧಾನ ಹೊರ ಹಾಕಿದ್ದಾರೆ.
ನಗರದ ಚಾಮರಾಜಪೇಟಿಯಲ್ಲಿ ಭಾನುವಾರ ಸಂಜೆ ನಡೆದ ಮಾಜಿ ಪ್ರಧಾನಿ ದೇವೇಗೌಡ ದಂಪತಿಯ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ನಾನು ಒಮ್ಮೆ ಮುಂಬೈ ಪ್ರವಾಸದಲ್ಲಿದ್ದೆ. ಅದೇ ವೇಳೆ ದೇವೇಗೌಡರು ಸಹ ಮುಂಬೈನಲ್ಲಿದ್ದರು. ಅಲ್ಲಿನ ಏರ್ ಪೋರ್ಟ್ ನಲ್ಲಿ ಶರದ್ ಪವಾರ್ ಸೇರಿದಂತೆ ಅನೇಕ ನಾಯಕರು ದೇವೇಗೌಡರನ್ನು ಭೇಟಿಯಾದರು. ಆಗ ನಾನು ಅಲ್ಲೇ ಪಕ್ಕದಲ್ಲಿ ಕುಳಿತಿದ್ದೆ. ರಾಜಕೀಯ ನಾಯಕರು ನನ್ನನ್ನು ಯಾರು ಅಂತ ಕೇಳಿದ್ರು. ಆಗ ದೇವೇಗೌಡರು ನನ್ನ ಹಾಗೂ ನನ್ನ ಮಠದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಅವರಿಗೆ ತಿಳಿಸುವ ಕೆಲಸ ಮಾಡಿದ್ರು. ದೇವೇಗೌಡರ ಆ ನಡೆ ನನಗೆ ಖುಷಿ ಕೊಟ್ಟಿತ್ತು ಎಂದು ಹೇಳಿದರು.
ಇದನ್ನೂ ಓದಿ : ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ‘ಹುಟ್ಟೂರ ಸನ್ಮಾನ’
ಇತ್ತೀಚೆಗೆ ನಾನು ದೆಹಲಿ ಪ್ರವಾಸ ಕೈಗೊಂಡಿದ್ದೆ. ನಮ್ಮ ಸಮುದಾಯದ ಒಬ್ಬ ಕ್ಯಾಬಿನೆಟ್ ನಾಯಕ ಜೊತೆಗೆ ಇದ್ದರು. ದೆಹಲಿಯಲ್ಲಿ ಹಲವು ನಾಯಕರು ನನ್ನ ಬಗ್ಗೆ ವಿಚಾರಿಸಿದರು. ಆ ವೇಳೆ ನನ್ನ ಜೊತೆಗಿದ್ದ ಆ ನಾಯಕ ನಿರ್ಮಲಾನಂದ ಸ್ವಾಮೀಜಿ ಅಂತ, ಆದಿಚುಂಚನಗಿರಿ ಮಠ ಅಂತ ಇದೆ. ಆ ಮಠದಲ್ಲಿ ಈ ಸ್ವಾಮೀಜಿ ಆಗಿದ್ದಾರೆ ಎಂದು ಹೇಳಿ ಸುಮ್ಮನಾದರು ಎಂದು ಹೆಸರು ಹೇಳದೆ ತಮ್ಮ ಸಮುದಾಯದ ನಾಯಕನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಈಗಿನ ನಾಯಕರಿಗೂ ಅಂದಿನ ದೇವೇಗೌಡರ ವ್ಯಕ್ತಿತ್ವಕ್ಕೂ ಬಹಳ ವ್ಯತ್ಯಾಸ ಇದೆ ಎಂದರು.
ನಿರ್ಮಲಾನಂದ ಸ್ವಾಮೀಜಿಯ ಭಾಷಣದ ಬಳಿಕ, ಸ್ವಾಮೀಜಿ ವೇದಿಕೆಯಲ್ಲೇ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಆ ರಾಜಕೀಯ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.