ಜಿನಿವಾ : ಸ್ವಯಂ ಘೋಷಿತ ದೇವಮಾನವ ಕೈಲಾಸ ದೇಶದ ಸ್ವಾಮಿ ನಿತ್ಯಾನಂದನ ಶಿಷ್ಯೆ ವಿಜಯಾ ಪ್ರಿಯಾ ನಿತ್ಯಾನಂದ ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಸಭೆಯಲ್ಲಿ ವಿಶ್ವ ಸಂಸ್ಥೆಯ ಖಾಯಂ ರಾಯಭಾರಿ ಮಾತನಾಡಿದ್ದಾರೆ. ಈ ವೇಳೆ ದೇಶದಿಂದ ನಿತ್ಯಾನಂದರು ತುಂಬಾ ಹಿಂಸೆಗೆ ಒಳಗಾಗುತ್ತಿದ್ದಾರೆ ಅವರಿಗೆ ಭದ್ರತೆ ಬೇಕಿದೆ ಎಂದು ಆಗ್ರಹಿಸಿದ್ದಾರೆ. ಆಕೆಯ ಫೇಸ್ ಬುಕ್ ಖಾತೆಯ ಪ್ರಕಾರ ವಿಜಯಾಪ್ರಿಯಾ ನಿತ್ಯಾನಂದ ಯುಎಸ್ ನ ಕೈಲಾಶ ದೇಶದ ವಿಶ್ವಸಂಸ್ಥೆಯ ರಾಯಭಾರಿಯಾಗಿದ್ದಾರೆ.
ವಿಶ್ವ ಸಂಸ್ಥೆಯ ಸಮ್ಮೇಳನದಲ್ಲಿ ವಿಜಯಪ್ರಿಯಾ ಹಲವು ದೇಶಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಆ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋವೊಂದರಲ್ಲಿ ವಿಜಯಾಪ್ರಿಯಾ ಅವರು ಅಮೆರಿಕಾದ ಕೆಲವು ಅಧಿಕಾರಿಗಳೊಂದಿಗೆ ಕೆಲವೊಂದು ಒಪ್ಪಂದ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕೈಲಾಸ ತನ್ನ ರಾಯಭಾರ ಕಚೇರಿಗಳನ್ನ ಹಲವಾರು ದೇಶಗಳಲ್ಲಿ ತೆರೆದಿದೆ ಎಂದು ಹೇಳಿಕೊಂಡಿದ್ದಾರೆ.
ನಿತ್ಯಾನಂದ ಶ್ರೀಗಳು ಸ್ಥಾಪಿಸಿದ ಕೈಲಾಸ ದೇಶವು ಹಿಂದು ಧರ್ಮದ ಮೊದಲ ಸಾರ್ವಭೌಮ ರಾಷ್ಟ್ರ, ಶ್ರೀಗಳು ಆದಿಶೈವ, ಸ್ಥಳೀಯ ಬುಡಕಟ್ಟು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಹಿಂದೂ ಸಂಪ್ರದಾಯಗಳ ಪುನರುಜ್ಜೀವನಗೊಳಿಸಿದ ಧೂತ ಎಂದಿದ್ದಾರೆ. ಅಂದಹಾಗೆ ವಿಶ್ವಸಂಸ್ಥೆ ಜಿನೀವಾದಲ್ಲಿ 19 ನೇ ಆರ್ಥಿಕ, ಸಾಮಾಜಿಕ , ಸಾಂಸ್ಕೃತಿಕ ಹಕ್ಕುಗಳ ಸಮ್ಮೇಳನವನ್ನು ಆಯೋಜಿಸಿತ್ತು.
ಈ ವೇಳೆ ಅವರು ಭಾಗವಹಿಸಿದ್ದ ಫೋಟೊಗಳನ್ನು ನಿತ್ಯಾನಂದ ಶೇರ್ ಮಾಡಿಕೊಂಡು ನಮ್ಮ ಕೈಲಾಸ ದೇಶವನ್ನು ವಿಶ್ವಸಂಸ್ಥೆ ಪರಿಗಣಿಸಿದೆ ಎಂದಿದ್ದನು. ಆದರೆ ಈ ವಿಡಿಯೋ ಶೇರ್ ಆಗ್ತಿದ್ದಂತೆ ವಿಶ್ವಸಂಸ್ಥೆ ಇದನ್ನು ತಿರಸ್ಕರಿಸಿದ್ದು, ಕೈಲಾಶ ಪ್ರತಿನಿಧಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.