Sunday, October 1, 2023
spot_img
- Advertisement -spot_img

ಇಂಡಿಯಾ-ಎನ್​ಡಿಎ ಯಾವುದರ ಜೊತೆಯೂ ನಾವು ಸೇರಲ್ಲ : ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ

ನವದೆಹಲಿ : ‘ನಾವು ಇಂಡಿಯಾ ಮತ್ತು ಎನ್​ಡಿಎ ಎರಡೂ ಮೈತ್ರಿ ಕೂಟಗಳ ಜೊತೆ ಸೇರುವುದಿಲ್ಲ, ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆ’ ಎಂದು ಬಹುಜನ ಸಮಾಜವಾದಿ ಪಕ್ಷ (ಬಿಎಸ್ ಪಿ) ದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟಗಳು ಹೆಚ್ಚಾಗಿ ಬಡವರ ವಿರೋಧಿ, ಜಾತಿವಾದಿ, ಕೋಮುವಾದಿ ಮತ್ತು ಶ್ರೀಮಂತರ ಪರವಾಗಿರುವ ಪಕ್ಷಗಳನ್ನು ಒಳಗೊಂಡಿವೆ. ಅವರ ನೀತಿಗಳ ವಿರುದ್ಧ ಬಿಎಸ್‌ಪಿ ನಿರಂತರವಾಗಿ ಹೋರಾಡುತ್ತಿದೆ. ಹಾಗಾಗಿ, ಆ ಎರಡೂ ಮೈತ್ರಿಕೂಟಗಳೊಂದಿಗೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಾಯಾವತಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ನಾಲ್ಕು ರಾಜ್ಯಗಳಲ್ಲಿ ಬಿಎಸ್‌ಪಿ ತನ್ನ ಸ್ವಂತ ಬಲದ ಮೇಲೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದೆ ಎಂದು ಮಾಯಾವತಿ ತಿಳಿಸಿದ್ದಾರೆ.

ಇದನ್ನೂ ಓದಿ : I.N.D.I.A ಒಕ್ಕೂಟದ ಮುಂಬೈ ಸಭೆಯ ಅಜೆಂಡಾ ಏನು ಗೊತ್ತಾ?

ಎಲ್ಲಾ ರಾಜಕೀಯ ಪಕ್ಷಗಳು ಬಿಎಸ್ ಪಿ ಜೊತೆ ಮೈತ್ರಿಗೆ ಉತ್ಸುಕವಾಗಿವೆ. ಒಂದು ವೇಳೆ ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳದಿದ್ದರೆ ಬಿಜೆಪಿ ಜೊತೆ ಕೈಜೋಡಿಸಿದಂತೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ನೀವು ವಿರೋಧ ಪಕ್ಷದ ನಾಯಕರನ್ನು ಭೇಟಿಯಾದರೆ ಜಾತ್ಯತೀತರು, ನೀವು ಅವರನ್ನು ಭೇಟಿ ಮಾಡದಿದ್ದರೆ ಬಿಜೆಪಿ ಜೊತೆ ಸೇರಿದ್ದೀರಿ ಎನ್ನುತ್ತಾರೆ ಎಂದು ಮಾಯಾವತಿ ಹೇಳಿದ್ದಾರೆ.

ಮಂಗಳವಾರ ಬಿಎಸ್‌ಪಿಯಿಂದ ಉಚ್ಛಾಟಿಸಲ್ಪಟ್ಟ ಸಹರಾನ್‌ಪುರದ ಮಾಜಿ ಶಾಸಕ ಇಮ್ರಾನ್ ಮಸೂದ್ ವಿರುದ್ಧ ಕಿಡಿಕಾರಿದ ಮಾಯಾವತಿ, ‘ಪಕ್ಷದಿಂದ ಹೊರಹಾಕಲ್ಪಟ್ಟ ನಂತರ ಮಾಜಿ ಶಾಸಕರು ಕಾಂಗ್ರೆಸ್ ಮತ್ತು ಆ ಪಕ್ಷದ ಉನ್ನತ ನಾಯಕರನ್ನು ಹೊಗಳುವುದರಲ್ಲಿ ನಿರತರಾಗಿದ್ದಾರೆ. ಅವರು ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಏಕೆ ಸೇರಿದರು? ಎಂಬ ಪ್ರಶ್ನೆ ಈಗ ಜನರಲ್ಲಿ ಮೂಡಿದೆ. ಇಂತವರನ್ನು ಜನರು ಹೇಗೆ ನಂಬುತಾರೆ’ ಎಂದರು.

ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ಇಂದು ಮತ್ತು ನಾಳೆ ಮುಂಬೈನಲ್ಲಿ ನಡೆಯಲಿದೆ. ಈ ಬಾರಿಯ ಸಭೆಯಲ್ಲಿ ಸುಮಾರು 28 ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದು, ಮೈತ್ರಿಕೂಟದ ಲೋಗೋ ಬಿಡುಗಡೆ ಮತ್ತು ಸಮನ್ವಯ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles