ಹಾಸನ : ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ 1 ಕೋಟಿ 28 ಲಕ್ಷ ಪಡಿತರ ಚೀಟಿದಾರರಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಲಕ್ಷ ಮಂದಿ ಹೊಸ ಕಾರ್ಡ್ ಗೆ ಅರ್ಜಿ ಹಾಕಿದ್ದಾರೆ. ಅರ್ಜಿ ಪರಿಶೀಲನೆ ನಡೆಸಿ ಎಪಿಎಲ್-ಬಿಪಿಎಲ್ ಕಾರ್ಡ್ ಗಳಿಗೆ ಅನುಮೋದನೆ ಕೊಡಲು ಸೂಚಿಸಲಾಗಿದೆ. ಬ್ಯಾಂಕ್ ಖಾತೆ ಇಲ್ಲದ ಕೆಲವರ ಕಾರ್ಡ್ ರದ್ದಾಗಿತ್ತು. ಆ ಬಗ್ಗೆಯೂ ಕ್ರಮ ವಹಿಸಲು ಸೂಚಿಸಿದ್ದೇನೆ ಎಂದರು.
ಕಾರು ಇದ್ದವರ, ಜಾತಿ ಪ್ರಮಾಣ ಪತ್ರ ಇಲ್ಲದವರ ಪಡಿತರ ಚೀಟಿ ರದ್ದಾಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಮುನಿಯಪ್ಪ, ಆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ನಾವು ಯಾವುದೇ ತೀರ್ಮಾನ ಮಾಡಿಲ್ಲ ಎಂದರು.
ಇದನ್ನೂ ಓದಿ : ಬ್ಯಾರಿಕೇಡ್ ಹಿಂದೆ ನಿಂತ ಬಿಜೆಪಿಗರು; ಮತದಾರರು, ಕನ್ನಡಿಗರಿಗೆ ಅವಮಾನ ಎಂದ ಖರ್ಗೆ
ಕೆಲ ದಿನಗಳ ಹಿಂದೆ ಹೊಸ ಪಡಿತರ ಚೀಟಿಗಳ ವಿತರಣೆ ಬಗ್ಗೆ ಮಾತನಾಡಿದ್ದ ಸಚಿವ ಮುನಿಯಪ್ಪ, ಒಂದಿಷ್ಟು ದಿನ ಯಾವುದೇ ಹೊಸ ಕಾರ್ಡ್ ಗೆ ಅನುಮತಿ ಕೊಡುವುದಿಲ್ಲ ಎಂದಿದ್ದರು. ಇದರಿಂದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದ ಜನರಿಗೆ ನಿರಾಸೆಯಾಗಿತ್ತು.
ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷಿ ಮತ್ತು ಅನ್ನಭಾಗ್ಯದ ಲಾಭ ಪಡೆಯಬೇಕಾದರೆ ಅರ್ಜಿದಾರರಿಗೆ ರೇಷನ್ ಕಾರ್ಡ್ ಅತ್ಯಗತ್ಯವಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.