ಬೆಳಗಾವಿ : ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ, ಪರಿಸ್ಥಿತಿ ನೋಡಿ ಮುಂದೆ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿ, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ವಿಚಾರವಾಗಿ ಮಾತನಾಡಿ, ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುತ್ತೇವೆ. ಸದ್ಯಕ್ಕೆ ಕಡ್ಡಾಯ ಮಾಡಿಲ್ಲ, ಮಾಸ್ಕ್ ಹಾಕುವಂತೆ ಸಲಹೆ ಕೊಟ್ಟಿದ್ದೇವೆ ಎಂದರು.
ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾದ ಹಿನ್ನೆಲೆ ಕೊರೊನಾ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಚೀನಾ ಹಾಗೂ ಅಮೇರಿಕಾದಲ್ಲಿ ಸೋಂಕು ಗಣನೀಯ ಏರಿಕೆ ಕಾಣುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಹೊಸ ರೂಪಾಂತರಿಗಳ ಪತ್ತೆಗೆ ರಾಜ್ಯ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿದೆ.
ಮೊದಲ ಎರಡು ಡೋಸ್ ಲಸಿಕೆಗೆ ಕೊಟ್ಟಷ್ಟು ಆಸಕ್ತಿ ಇವಾಗ ಜನರು ತೋರಿಸುತ್ತಿಲ್ಲ.ಕೋವಿಡ್ ಹೋಗಿದೆ ಎಂಬ ಮನಸ್ಥಿತಿಯಲ್ಲಿ ಜನರು ಇದ್ದಾರೆ. ಇವಾಗ ಚೀನಾ ಮತ್ತು ಕೆಲವು ದೇಶಗಳ ಪರಿಸ್ಥಿತಿ ನೋಡಿ ಮತ್ತೆ ಜನರು ಆಸಕ್ತಿಯಿಂದ ಲಸಿಕೆ ಪಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ದೇಶಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಾಗೂ ಹೊಸ ರೂಪಾಂತರಿ ವೈರಾಣು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಐಎಲ್‌ಐ ಮತ್ತು ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.