ಬೆಂಗಳೂರು: ದೆಹಲಿಗೆ ಬರುವಂತೆ ನನಗೆ ಇನ್ನೂ ಮೆಸೇಜ್ ಬಂದಿಲ್ಲ, ಎರಡು ದಿನದ ಹಿಂದೆ ಮೆಸೇಜ್ ಬರುತ್ತೆ ಎನ್ನಲಾಗಿತ್ತು. ಆದರೆ ಇಲ್ಲಿಯವರೆಗೆ ಬಂದಿಲ್ಲ, ನಾನೂ ಕಾಯ್ತಾ ಇದ್ದೀನಿ. ಮೆಸೇಜ್ ಬಂದ್ರೆ ನಾಳೆನೇ ದೆಹಲಿಗೆ ಹೋಗ್ತೀನಿ’ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಹೇಳಿದರು.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಸೋಮಶೇಖರ್, ‘ನಾನು ಅಮಿತ್ ಶಾ ಜತೆ ಚನ್ನಾಗಿದ್ದೀನಿ ಎನ್ನುವ ಕಾರಣಕ್ಕಾಗಿ ಟಾರ್ಗೆಟ್ ಆಗಿಲ್ಲ; ಅವರು ಕೇಂದ್ರದಲ್ಲಿ ಸಹಕಾರ ಮಂತ್ರಿ, ನಾನು ಸಹ ಸಹಕಾರ ಮಂತ್ರಿ ಆಗಿದ್ದೆ ಅಷ್ಟೆ. ಪಕ್ಷದಲ್ಲಿ ಸಾವಿರಾರು ಕಾರ್ಯಕರ್ತರು ಇರ್ತಾರೆ, ಎಲ್ಲರೂ ಹೊರಟೋದ್ರು ಅಂದರೆ ಹೇಗೆ? ಒಂದಷ್ಟು ಜನ ಹೋಗಿರಬಹುದು’ ಎಂದರು.
ಯಶವಂತಪುರದಲ್ಲಿ ಹೆಚ್. ಡಿ ಕುಮಾರಸ್ವಾಮಿ ಸಭೆ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಯಾರು ಬೇಕಾದ್ರೂ ಸಭೆ ಮಾಡಲಿ, ಡಿಸೆಂಬರ್‌ಗೆ ಬಿಬಿಎಂಪಿ ಚುನಾವಣೆ ಅಂತ ಸಭೆಗಳು ನಡೆಯುತ್ತಿವೆ. ನಾನೂ ಕೂಡ ಸಭೆ ಮಾಡ್ತಾ ಇದ್ದೀನಿ. ಕಾರ್ಯಕರ್ತರ ಕುರಿತು ಸಭೆ ಮಾಡಬೇಕು ಮಾಡ್ತಾರೆ ಅಷ್ಟೆ’ ಎಂದರು ಹೇಳಿದರು.
ಇದನ್ನೂ ಓದಿ; ‘ಕೈ’ ಹಿಡಿಯೋಕೆ ತಡ ಮಾಡ್ತಿರೋದ್ಯಾಕೆ ಎಸ್‌ಟಿಎಸ್; ‘ಮುಂಬೈ ಡೈರಿ’ಗೆ ಬೆದರಿದ್ರಾ ಮಾಜಿ ಸಚಿವ..?
ಕ್ಷೇತ್ರದ ಮೂಲ ಬಿಜೆಪಿಗರು ತುಳಿಯುತ್ತಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿ, ‘ಸ್ಥಳೀಯ ಬಿಜೆಪಿ ನಾಯಕರು ತುಳೀತಾರೆ ಅನ್ನೋದೇನೂ ಇಲ್ಲ; ರಾಜ್ಯ ಮಟ್ಟದ ನಾಯಕರು ಅಂದಾಗ ತುಳೀತಾರೆ. ನಾನು ಸದ್ಯಕ್ಕೆ ನನ್ನ ಕ್ಷೇತ್ರದಲ್ಲಿ ಅಷ್ಟೇ ಇರೋದು. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರನ್ನ ಹೊಗಳಬಾರದು ಅಂದರೆ ಹೇಗೆ? ನಮ್ಮ ಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ಹೊಗಳಲೇಬೇಕಾಗುತ್ತದೆ. ನಾಲ್ಕು ಒಳ್ಳೆ ಮಾತಾಡಬಾರದು ಅಂತ ರಿಸ್ಟ್ರಿಕ್ಟ್ ಮಾಡಬಾರದು. ಶಿವಕುಮಾರ್ ನನ್ನನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಬೆಳೆಸಿದ್ದಾರೆ ಅಂದೆ, ಅದು ತಪ್ಪಾ ಹಾಗಾದ್ರೆ’ ಎಂದು ಪ್ರಶ್ನಿಸಿದರು.
‘ನಾನು ಕಾಂಗ್ರೆಸ್ ಗೆ ಹೋಗ್ತೀನಿ ಅನ್ನೊ ಅನುಮಾನ ಯಾಕೆ? ಸದ್ಯಕ್ಕೆ ನಾನು ಬಿಜೆಪಿಯ ಶಾಸಕ. ಕೆಲವರು ಶಾಸಕರಾಗಬೇಕು ಅನ್ನೋ ಆಸಕ್ತಿ ಇದ್ದವರು ಇದ್ದಾರೆ; ಚುನಾವಣೆಗೂ ಮುನ್ನವೇ ಹೀಗೊಂದು ಸುದ್ದಿ ಹರಿಸಿದ್ದಾರೆ. ಈಗಲೂ ಅದನ್ನೇ ಮಾಡ್ತಾ ಇದ್ದಾರೆ ಅಷ್ಟೆ’ ಎಂದು ತಿರುಗೇಟು ಕೊಟ್ಟರು.
ನಕಲಿ ಬಿಲ್ ಮಾಡಿದವರನ್ನ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ತಾ ಇದ್ದಾರೆ ಅನ್ನೊ ಹೆಚ್ ಡಿಕೆ ಆರೋಪ ವಿಚಾರವಾಗಿ ಮಾತನಾಡಿ, ‘ಕ್ಷೇತ್ರದ ಜನತೆ ಸತತ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಹಾಗಾದ್ರೆ, ನನ್ನನ್ನು ಯಾಕೆ ಗೆಲ್ಲಿಸಿದ್ರು? ಅವರ ಅಭ್ಯರ್ಥಿ ನಾಲ್ಕು ಬಾರಿ ಸೋತಿದ್ದಾರೆ. ಕಾಮಗಾರಿ ತನಿಖೆಗೆ ಡಿಸಿಎಂ ಆದೇಶ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ತನಿಖೆ ನಡೆಯುತ್ತಿದೆ. ಯಾವುದೇ ಸಣ್ಣ ಪುಟ್ಟದ್ದು ನಕಲಿ ಅಂತ ಗೊತ್ತಾದ್ರೆ ಕ್ರಮ ವಹಿಸಲಿ’ ಎಂದು ಸವಾಲು ಹಾಕಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.