ಮೈಸೂರು: ಡಿಕೆಶಿ ಮನೆಯ ಮೇಲೆ ದಾಳಿ ಮಾಡಿದಾಗ ಕೊಟ್ಯಂತರ ರೂಪಾಯಿ ಹಣ ಸಿಕ್ಕಿದೆ. ಇಂತಹವರ ಮಾತಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಇಂತವರ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ. ಯಾರೇ ಆದರೂ ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂದು ಹೇಳಿದರು.
ಬಿಜೆಪಿ ಶಾಸಕ ಮಾಡ್ನಾಳ್ ವಿರೂಪಾಕ್ಷಪ್ಪ ಪುತ್ರನ ಪ್ರಕರಣದಲ್ಲಿ, ಬಿಜೆಪಿ 40% ಕಮಿಷನ್ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ, ಇದಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ರಾಜಿನಾಮೆ ನೀಡಬೇಕು ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.ಕಾಂಗ್ರೆಸ್ ನವರಿಗೆ ಹಣ ಕೊಟ್ಟು ಜನರನ್ನು ಕರೆಸುವ ಅಭ್ಯಾಸವಿದೆ. ಆದರೆ, ಈ ಅಭ್ಯಾಸ ಬಿಜೆಪಿಗೆ ಇಲ್ಲ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಿಗುತ್ತಿರುವ ಅಪಾರ ಬೆಂಬಲದಿಂದ ಕಾಂಗ್ರೆಸ್ ನಾಯಕರು ವಿಚಲಿತರಾಗಿ, ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಗೆ ಜನ ನಿರೀಕ್ಷೆಗೂ ಮೀರಿ ಬರುತ್ತಿದ್ದಾರೆ. ರಾಜ್ಯದ ಜನ ನಮ್ಮ ಜೊತೆ ಇರುವುದು ಸ್ಪಷ್ಟವಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.