ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಜೆಡಿಎಸ್ ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಾಜಿ ಪ್ರಧಾನಿಗಳು ಉತ್ತರ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧ ಇದ್ದೇನೆ ಎಂದು ಸವಾಲು ಹಾಕಿದ್ದಾರೆ.
ಪಕ್ಷ ಸಂಘಟನೆ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ಲಿಂಗೇಶ್, ಮಾಜಿ ಶಾಸಕ ಶಿವಶಂಕರ್ ಅವರೆಲ್ಲ ಸೇರಿ ಈ ಸಭೆ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಈ ಸಮೂಹ ನೋಡಿ ನನಗಷ್ಟೇ ಅಲ್ಲ, ದೇವೇಗೌಡರಿಗೆ ಕೂಡ ಬಹಳ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳ ನಾಯಕರು ಜನರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ಬದಲು ಒಂದೊಂದು ವರ್ಗಗಳ ಸಮಾವೇಶ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನರಿಗೆ ಕೊಟ್ಟಿರುವುದೇನು? ಸಭೆಗೆ ಜನ ಸೇರಿಸೋದು ಮಾತ್ರ ಅವರ ಕೆಲಸವಾ? ಸಮಾವೇಶಗಳ ಮೂಲಕ ಆಯಾ ಸಮಾಜಗಳಿಗೆ ಏನು ಸಂದೇಶ ಕೊಡುತ್ತಾರೆ ಅವರು? ಎಂದು ಕಿಡಿಕಾರಿದರು.
ಎಲ್ಲ ಸಮುದಾಯಗಳನ್ನು ಒಳಗೊಂಡ ಪಕ್ಷ ನಮ್ಮದು. ಎಲ್ಲರೂ ನಮ್ಮವರು ಎನ್ನುವ ತತ್ವ ನಮ್ಮದು. ಬಿಜೆಪಿಯಿಂದ ಸಮುದಾಯವಾರು ಸಮಾವೇಶಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಅದೇ ಕೆಲಸ ಮಾಡುತ್ತಿದೆ. ಆದರೆ, ನಮ್ಮ ಪಕ್ಷ ಅಂಥ ಸಭೆಗಳನ್ನು ಮಾಡುತ್ತಿಲ್ಲ, ಬದಲಿಗೆ ಸರ್ವ ಜನರ ಕಲ್ಯಾಣದ ಬಗ್ಗೆ ಕೆಲಸ ಮಾಡುತ್ತಿದೆ ರಾಜ್ಯದ ಒಟ್ಟಾರೆ ಸಮಸ್ಯೆಗಳಿಗೆ ಪರಿಹಾರ ನೀಡಲು ಪಂಚರತ್ನ ರಥಯಾತ್ರೆ ಹಮ್ಮಿಕೊಂಡಿದ್ದೇನೆ. ಪಂಚರತ್ನ ಯೋಜನೆ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಹೇಳಿದ್ದಾರೆ.