ಬೆಂಗಳೂರು : ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸಭೆಯಲ್ಲಿ ಮೈತ್ರಿ ವಿಚಾರವಾಗಿ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ, ಅಮಿತ್ ಶಾ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ರಾಜ್ಯ ರಾಜಕೀಯ, ಮೈತ್ರಿ ಬಗ್ಗೆ ಏನೂ ಚರ್ಚೆ ಆಗಿಲ್ಲ. ಅವರಾಗಿ ಏನೂ ಕೇಳಿಯೂ ಇಲ್ಲ, ನಾನು ಹೇಳಿಯೂ ಇಲ್ಲ. ಮೈತ್ರಿಗೆ ರಾಜ್ಯ ನಾಯಕರ ಆಕ್ಷೇಪ ಇಲ್ಲ. ಆದರೆ, ಹೈಕಮಾಂಡ್ ನಾಯಕರು ಏನೂ ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ತೀರ್ಮಾನ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ಇದನ್ನೂ ಓದಿ : ‘ಚೈತ್ರಾ ಕುಂದಾಪುರ ಕೇಸ್‌ನಲ್ಲಿರುವ ಎಲ್ಲರಿಗೂ ಉಗ್ರ ಶಿಕ್ಷೆಯಾಗಲಿ’
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿಗೆ ಒಂದು ತೊಟ್ಟು ಕಾವೇರಿ ನೀರು ಬಿಡಬಾರದು. ಇದುವರೆಗೆ ನೀರು ಬಿಟ್ಟು ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ. ಸರ್ಕಾರ ನ್ಯಾಯಾಲಯಕ್ಕೆ ಕಾವೇರಿ ಕಣಿವೆಯ ವಾಸ್ತವ ಪರಿಸ್ಥಿತಿ ವಿವರಿಸಬೇಕು. ರಾಜ್ಯದ 195 ತಾಲೂಕುಗಳಲ್ಲಿ ಬರಗಾಲ ಇದೆ ಎಂಬ ಸರ್ಕಾರದ ಘೋಷಣೆ ನೋಡಿದೆ. ಸರ್ಕಾರ ಕೂಡಲೇ ಬರ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.
ಕಳೆದ ವಾರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಯಡಿಯೂರಪ್ಪ, ಬಿಜೆಪಿ-ಜೆಡಿಎಸ್ ಮೈತ್ರಿಯಾಗಲಿದೆ. ಜೆಡಿಎಸ್ ಗೆ ನಾಲ್ಕು ಸೀಟು ಬಿಟ್ಟು ಕೊಡಲು ಅಮಿತ್ ಶಾ ಒಪ್ಪಿದ್ದಾರೆ ಎಂದು ಹೇಳಿದ್ದರು. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಆದರೆ, ಯಡಿಯೂರಪ್ಪ ಅವರನ್ನು ಹೊರತು ಯಾವುದೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಮಲ-ದಳ ಮೈತ್ರಿ ಕುರಿತು ಖಚಿತಪಡಿಸಿರಲಿಲ್ಲ. ಈಗ ಸ್ವತಃ ಯಡಿಯೂರಪ್ಪ ಅವರೇ ಮೈತ್ರಿ ಕುರಿತು ಇನ್ನೂ ಖಚಿತವಾಗಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.