ಬೆಂಗಳೂರು : ಮಕ್ಕಳಿಗೆ ಪರೀಕ್ಷೇ ಇರೋದ್ರಿಂದ ರಾತ್ರಿ ಹೆಚ್ಚಿನ ಸಮಯದವರೆಗೆ ಧ್ವನಿ ವರ್ಧಕ ಬಳಸೋದು ಬೇಡ , ದಯವಿಟ್ಟು ಮಕ್ಕಳಿಗೆ ಓದಲು ಸಹಕರಿಸಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.
ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದೀಗ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗುತ್ತದೆ. ಎಲ್ಲಾ ಮಕ್ಕಳು ಅವರವರದೇ ಆದ ತಯಾರಿಯಲ್ಲಿರುತ್ತಾರೆ ಎಂದು ತಿಳಿಸಿದರು.
ರಾಜಕೀಯ ಕಾರ್ಯಕ್ರಮ, ಆರ್ಕೆಸ್ಟ್ರಾ ಮನರಂಜನಾ ಕಾರ್ಯಕ್ರಮ ಮಾಡುವವರು, ಈ ಸಮಯದಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮಕ್ಕಳ ಬಗ್ಗೆ ಕಾಳಜಿ ವಹಿಸುವುದೂ ಸಹ ದೇವರು ಮೆಚ್ಚುವ ಕಾರ್ಯ. ಪೊಲೀಸ್ ಇಲಾಖೆ ಸಹ ಈ ಕುರಿತು ಗಮನಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ವೇಳೆಯಲ್ಲಿ ಮಕ್ಕಳು ಶಾಂತ ಮನಸ್ಥಿತಿಯಿಂದ ಓದಿಕೊಳ್ಳಲು ನಾವೆಲ್ಲ ಸಹಕರಿಸಬೇಕಿದೆ, ಯಾವುದೇ ಗಲಾಟೆ ಘರ್ಷಣೆಯಾಗದಂತೆ ಮಕ್ಕಳಿಗೆ ನೆರವಾಗಬೇಕಿದೆ ಎಂದರು.