ಹಾಸನ: ಬೆಂಬಲಿಗರ ಅಭಿಪ್ರಾಯದಂತೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತೀರ್ಮಾನಿಸಿದ್ದೇನೆ ಎಂದು ಎನ್ಆರ್ ಸಂತೋಷ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಸೋಮವಾರ ಐವತ್ತು ಸಾವಿರ ಜನರೊಂದಿಗೆ ಹೋಗಿ ನಾಮಪತ್ರ ಸಲ್ಲಿಸುತ್ತೇನೆ ಎಂದರು. ಸಭೆಯಲ್ಲಿ ಮಾತನಾಡಿ, ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಬಳಿಕ ಸ್ವತಂತ್ರ ಸ್ಚರ್ಧೆಯೋ ಅಥವಾ ಬೇರೆ ಪಕ್ಷ ಸೇರಬೇಕೋ ಎನ್ನುವ ತೀರ್ಮಾನ ಮಾಡುತ್ತೇನೆ. ಯಾವುದೇ ಕಾರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ , ಸ್ಪರ್ಧೆ ಮಾಡಿಯೇ ಸಿದ್ದ, ಜೆಡಿಎಸ್ಗೆ ಆಹ್ವಾನ ಬಂದರೆ ಆಲೋಚನೆ ಮಾಡುವುದಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಂಬಂಧಿ ಎನ್ಆರ್ ಸಂತೋಷ್ಗೆ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ಇದರಿಂದ ಅಸಾಮಾಧಾನಗೊಂಡ ಎನ್ಆರ್ ಸಂತೋಷ್, ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ.
ಎನ್ಆರ್ ಸಂತೋಷ್ ಟಿಕೆಟ್ ಕೈ ತಪ್ಪಿದಕ್ಕೆ ಅಭಿಮಾನಿಗಳು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿದರು. ಅಲ್ಲದೇ ಬಿಜೆಪಿ ಚುನಾವಣಾ ಪ್ರಚಾರಕ್ಕೆ ರೆಡಿಯಾಗಿದ್ದ ವಾಹನದ ಮೇಲಿನ ಬಿಜೆಪಿ ಕಮಲ ಚಿಹ್ನೆ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.