ಹೊಸದಿಲ್ಲಿ: ನಮ್ಮ ರಾಷ್ಟ್ರೀಯತೆ ಯಾರಿಗೂ ಅಪಾಯಕಾರಿಯಾಗುವುದಿಲ್ಲ. ಅದು ನಮ್ಮ ಸ್ವಭಾವವೂ ಅಲ್ಲ. ಇಡೀ ವಿಶ್ವ ಒಂದು ಕುಟುಂಬ (ವಸುದೈವ ಕುಟುಂಬಕಂ) ಎಂದು ನಮ್ಮ ರಾಷ್ಟ್ರೀಯತೆ ಪ್ರತಿಪಾದಿಸುತ್ತದೆ ಅಂತಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾಜಿ ಅಧಿಕಾರಿಗಳ ಸಂಘಟನೆಯಾದ ಸಂಕಲ್ಪ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೀಯತೆಯ ಭಾರತೀಯ ಪರಿಕಲ್ಪನೆ ‘ವಸುದೈವ ಕುಟುಂಬಕಂ’ ಎಂಬ ತತ್ವವನ್ನು ಮುಂದುವರಿಸುವಂಥದ್ದು. ಈ ಭಾವನೆಯನ್ನು ಜಗತ್ತಿನಾದ್ಯಂತ ಪಸರಿಸುತ್ತದೆ. ಆದ್ದರಿಂದ ಭಾರತದಲ್ಲಿ ಹಿಟ್ಲರ್ ಆಗಲು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಆಗಲು ಹೊರಟರೆ ದೇಶದ ಜನ ಅವರನ್ನು ಕೆಳಗೆ ಇಳಿಸುತ್ತಾರೆ. ಪ್ರತಿಯೊಬ್ಬರೂ ಜಾಗತಿಕ ಮಾರುಕಟ್ಟೆ ಬಗ್ಗೆ ಮಾತನಾಡುತ್ತಾರೆ. ಆದರೆ ಭಾರತ ಮಾತ್ರ ವಸುದೈವ ಕುಟುಂಬಕಂ ಬಗ್ಗೆ ಮಾತನಾಡುತ್ತಿದೆ. ಇಷ್ಟು ಮಾತ್ರವಲ್ಲದೇ ಇಡೀ ವಿಶ್ವವನ್ನು ಒಂದು ಕುಟುಂಬವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಧರ್ಮ, ಭಾಷೆ ಅಥವಾ ಸಮಾನ ಹಿತಾಸಕ್ತಿಯ ವ್ಯಕ್ತಿಗಳಿಂದ ಆಧರಿತವಾಗಿರುವ ಇತರ ರಾಷ್ಟ್ರೀಯವಾದದ ಪರಿಕಲ್ಪನೆಗಳಿಗಿಂತ ಭಿನ್ನ. ಪ್ರಾಚೀನ ಕಾಲದಿಂದಲೂ ವೈವಿಧ್ಯತೆ ಭಾರತೀಯ ಪರಿಕಲ್ಪನೆಯ ಭಾಗ ಎಂದರು.