ಬೆಳಗಾವಿ : ನಾವು ಯಾರನ್ನೂ ಬೇಡ ಎಂದು ತಿರಸ್ಕರಿಸುವುದಿಲ್ಲ. ನಮ್ಮಿಂದ ದೂರ ಹೋಗಿರುವ ಅನೇಕರು ಮತ್ತೆ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅರ್ಜಿ ಹಾಕುವಂತೆ ತಿಳಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಬೇರೆ ಪಕ್ಷದಿಂದ ಬರಲು ಇಚ್ಛಿಸುವವರಿಗೆ ಮುಕ್ತ ಆಹ್ವಾನ ನೀಡುತ್ತೇನೆ ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್ ಸರ್ಕಾರ ಬರಲಿದ್ದು, ಅದರ ಭಾಗವಾಗಿರಬೇಕು ಎಂದು ಬಯಸುವವರು ಪಕ್ಷ ಸೇರಬಹುದು ಎಂದು ಮಾಹಿತಿ ಕೊಟ್ಟರು.
ಪಕ್ಷ ಸೇರುವವರಲ್ಲಿ ಈ ಹಿಂದೆ ಪಕ್ಷ ಬಿಟ್ಟು ಹೋಗಿದ್ದವರು ಮತ್ತೆ ಸೇರ್ತಾರ ಈಗ ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೋಡಿ ಇಲ್ಲಿಂದ ಹೋದವರು ಸೇರಿದಂತೆ ಎಲ್ಲರೂ ಬೇಸತ್ತಿದ್ದಾರೆ ಎಂದರು. ರಾಮನಗರದಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ಸಚಿವ ಅಶ್ವತ್ಥ ನಾರಾಯಣ ಹೇಳಿದ ಬಗ್ಗೆ ಮಾತನಾಡಿ, ಕಟ್ಟಲಿ, ಅದನ್ನು ಬೇಡ ಎಂದು ತಡೆದಿರುವವರು ಯಾರು? ರಾಮಮಂದಿರ, ಸೀತಾ ಮಂದಿರ, ಹನುಮಂತನ ಮಂದಿರ ಕಟ್ಟಲಿ, ಶಿವ ಮಂದಿರ ಕಟ್ಟಲಿ. ಬೇಕಾದರೆ ಅಶ್ವತ್ಥ ನಾರಾಯಣ ಅವರ ಮಂದಿರವನ್ನೂ ಕಟ್ಟಿಕೊಳ್ಳಲಿ ಎಂದರು.