ಬೆಂಗಳೂರು: ಧಮ್ ಇದ್ದರೆ, ತಾಕತ್ತಿದ್ದರೆ ಎಂದು ವೀರಾವೇಶದ ಭಾಷಣ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಾನು ಅಕ್ರಮ ಮಾಡಿದ್ದರೆ ಅಪರಾಧಿ ಎಂದು ಸಾಬೀತುಪಡಿಸಿ ಜೈಲಿಗೆ ಹಾಕಿ. ಸರ್ಕಾರಕ್ಕೆ ತಾಕತ್ತಿದ್ದರೆ ನನ್ನ ಅವಧಿ ಸೇರಿ 2006ರಿಂದ ಈಚೆಗಿನ ಎಲ್ಲಾ ಅವ್ಯವಹಾರ ಆರೋಪಗಳ ಬಗ್ಗೆಯೂ ನ್ಯಾಯಾಂಗ ತನಿಖೆ ನಡೆಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿಗೆ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಬಿಜೆಪಿ ಪಕ್ಷದವರು ಸಿದ್ದರಾಮಯ್ಯ, ಸ್ಕ್ಯಾಮ್ ರಾಮಯ್ಯ ಎಂಬ ಸುಳ್ಳಿನ ಪುಸ್ತಕ ಹೊರತಂದಿದ್ದಾರೆ. ನಾವು 40 ಪರ್ಸೆಂಟ್ ಭ್ರಷ್ಟಾಚಾರ, ಪಿಎಸ್‌ಐ ನೇಮಕಾತಿ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಹಗರಣಗಳನ್ನು ಬಯಲಿಗೆಳೆದಿದ್ದೇವೆ. ಇದ್ರಿಂದ ತಪ್ಪಿಸಿಕೊಳ್ಳಲು ಸುಳ್ಳು ಪುಸ್ತಕ ತಂದಿದ್ದು, ಈ ಪುಸ್ತಕದಲ್ಲಿರುವ ಯಾವುದಾದರೂ ಒಂದು ಆರೋಪವನ್ನು ಬಿಜೆಪಿಯವರು ಹಿಂದಿನ 3 ವರ್ಷಗಳಲ್ಲಿ ಸದನದ ಒಳಗೆ ಅಥವಾ ಸದನದ ಹೊರಗೆ ಪ್ರಸ್ತಾಪ ಮಾಡಿದ್ದಾರಾ? ಕಾನೂನು ಗೊತ್ತಿಲ್ಲದ ನಳಿನ್‌ಕುಮಾರ್ ಕಟೀಲ್ ಮತ್ತಿತರರು ನನ್ನನ್ನು ಜೈಲಿಗೆ ಕಳುಹಿಸುವ ಮಾತನಾಡಿದ್ದಾರೆ. ಕೇಶವಕೃಪದಲ್ಲಿ ಬರೆದುಕೊಟ್ಟಿದ್ದನ್ನು ಬಂದು ಓದಿದ್ದಾರೆ. ನನ್ನನ್ನು ಜೈಲಿಗೆ ಹಾಕಬೇಕಾದ್ರೆ ಮೊದಲು ನ್ಯಾಯಯುತ ತನಿಖೆ ಆಗಬೇಕು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಾನು ಅಪರಾಧಿ ಎಂದು ಸಾಬೀತಾಗಬೇಕು. ಹೀಗಾಗಿ ನಾನೇ ಹೇಳುತ್ತಿದ್ದೇನೆ 2006 ರಿಂದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡರು ಮತ್ತು ನಮ್ಮ ಸರ್ಕಾರ ಹಾಗೂ ಈ 4 ವರ್ಷಗಳ ಸರ್ಕಾರದ ಎಲ್ಲವನ್ನೂ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ತನಿಖೆ ಬಗ್ಗೆ ನನಗೆ ಯಾವ ಹೆದರಿಕೆಯೂ ಇಲ್ಲ ಎಂದು ಹೇಳಿದರು.
ಇನ್ನು ತಮ್ಮ ಮೇಲಿನ ಪಿ.ರಾಜೀವ್ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ರೀಡೂ ಮಾಡಿ ಎಂದು ಹೇಳಿದವರು ನ್ಯಾಯಾಲಯ. ಕೆಂಪಣ್ಣ ಅವರ ವರದಿಯಲ್ಲಿ ಸಿದ್ದರಾಮಯ್ಯ ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೆ ಕೆಲವರು ಹೈಕೋರ್ಟ್‌ಗೆ ಹೋಗಿದ್ದರೂ ಅರ್ಜಿ ಪರಿಗಣಿಸಿಲ್ಲ. ಈ ಬಿಜೆಪಿಯವರು ಮಾತನಾಡಿದ್ರೆ ಅರ್ಕಾವತಿ ರೀಡೂ, ಅರ್ಕಾವತಿ ರೀಡೂ ಎಂದು ಬೊಬ್ಬೆ ಹಾಕುತ್ತಾರೆ. ಈ ರೀಡೂ ಎಂಬುದು ಹೈಕೋರ್ಚ್ ಹೇಳಿದ್ದು, ನಾವಲ್ಲ ಎಂದು ಸ್ಪಷ್ಟಪಡಿಸಿದ್ರು.