ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ 28 ರಂದು ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಇದೀಗ ದೇಶ- ವಿದೇಶಗಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಇದುವರೆಗೆ 60 ಲಕ್ಷಕ್ಕೂ ಮೇಲ್ಪಟ್ಟು ಜನರು ನೋಂದಣಿ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 28ರಂದು ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವಿರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ, ಡಾ.ಡಿ.ಎಸ್. ಕರ್ಕಿ ಅವರ ಹಚ್ಚೇವು ಕನ್ನಡದ ದೀಪ ಹಾಗೂ ಡಾ. ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ.
ಈ ಕಾರ್ಯಕ್ರಮ ನೋಂದಣಿ ಮಾಡಿಕೊಳ್ಳುವ ಸಲುವಾಗಿ ಇಲಾಖೆಯಿಂದ ಪ್ರತ್ಯೇಕ ಕ್ಯೂ ಆರ್ ಕೋಡ್ ವ್ಯವಸ್ಥೆ ಆರಂಭಿಸಿದ್ದು, ಇದರಲ್ಲಿ 29 ರಾಜ್ಯಗಳು ಹಾಗೂ 25 ರಾಷ್ಟ್ರಗಳಿಂದ ಕನ್ನಡ ಪ್ರೇಮಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.ಒಂದು ಕೋಟಿ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಏಕ ಕಾಲದಲ್ಲಿ ಕನ್ನಡದ ಕಂಪು ಪಸರಿಸುತ್ತಾರೆ ಎಂಬ ಗುರಿ ಹೊಂದಲಾಗಿತ್ತು. ಆದರೆ ಈಗಾಗಲೇ ಕ್ಯೂಆರ್ ಕೋಡ್ಲ್ಲಿ 60 ಲಕ್ಷ ನೋಂದಣಿಯಾಗಿರುವುದನ್ನು ಗಮನಿಸಿದರೆ ಕೋಟಿ ಸಂಖ್ಯೆಯನ್ನು ಮೀರಿ ಕನ್ನಡ ಪ್ರೇಮಿಗಳು ಈ ವೃಂದ ಗಾಯನದಲ್ಲಿ ಭಾಗವಹಿಸಬಹುದು ಎಂಬ ವಿಶ್ವಾಸವನ್ನು ಇಲಾಖೆ ಮೂಲಗಳು ವ್ಯಕ್ತಪಡಿಸಿವೆ.
ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಲು ಕರ್ನಾಟಕ ಮಾತ್ರವಲ್ಲ 25 ರಾಷ್ಟ್ರ ಹಾಗೂ 29 ರಾಜ್ಯಗಳಿಂದ ಕನ್ನಡಿಗರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ. ಬಿಂದು ಸಿಂಧುವಾಗುವ ರೀತಿ ಕನ್ನಡಿಗರ ಧ್ವನಿ ಕೋಟಿ ಮೀರಲಿ ಎಂದು ಆಶಿಸುತ್ತೇನೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರತಿಯೊಬ್ಬರೂ ಭಾಗಿಯಾಗುವಂತೆ ಮನವಿ ಮಾಡುತ್ತೇನೆ ಎಂದುಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.