ಬೆಂಗಳೂರು : ಭಾರತದ ಮೊದಲ ಬಾಹ್ಯಾಕಾಶ ನೌಕೆ ಆದಿತ್ಯ ಎಲ್-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಚಂದ್ರಯಾನ-3ರ ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋದಲ್ಲಿರುವ ನಮ್ಮ ವಿಜ್ಞಾನಿಗಳುಮತ್ತು ಇಂಜಿನಿಯರ್ ಗಳಿಗೆ ಅಭಿನಂದನೆಗಳು. ‘ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುವ ಸಲುವಾಗಿ ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ’ ಎಂದು ಹೇಳಿದ್ದಾರೆ.
ಚಂದ್ರಯಾನ-3ರ ಯಶಸ್ಸಿನ ಬಳಿಕ ಇಸ್ರೋದ ಬಹು ನಿರೀಕ್ಷಿತ ಸೂರ್ಯಯಾನ ಯೋಜನೆಯ ಬಾಹ್ಯಾಕಾಶ ನೌಕೆ ಆದಿತ್ಯ ಎಲ್-1 ಇಂದು ಉಡಾವಣೆಯಾಗಿದೆ. ಅಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್-1 ನೌಕೆ ನಭಕ್ಕೆ ಚಿಮ್ಮಿದೆ.
ಮಿಷನ್ ಆದಿತ್ಯ ಎಲ್-1 ನೌಕೆ ನಾಲ್ಕು ತಿಂಗಳ ಬಳಿಕ, ಅಂದರೆ ಮುಂದಿನ ಜನವರಿ ಮೊದಲ ವಾರದಲ್ಲಿ ನಿಗದಿತ ಹಾಲೋ ಆರ್ಬಿಟ್‌ಗೆ (ಹಾಲೋ ಕಕ್ಷೆ) ಸೇರಲಿದೆ. ಸೂರ್ಯನ ಅಧ್ಯಯನದ ಉದ್ದೇಶದಿಂದ ಆದಿತ್ಯ ಎಲ್-1 ಮಿಷನ್ ಉಡಾವಣೆ ಮಾಡಲಾಗಿದೆ. ಇದು ಬರೋಬ್ಬರಿ 15 ಲಕ್ಷ ಕಿ.ಮೀ ದೂರ ಹಾರಾಟ ನಡೆಸುವ ಮೂಲಕ ಭೂಮಿಯ ಗುರುತ್ವಾಕರ್ಷಣ ರೇಖೆಯನ್ನು ದಾಟಿ ನಿಗದಿತ ಕಕ್ಷೆಯನ್ನು ಸೇರಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.