ಬೆಂಗಳೂರು: ‘ನಮ್ಮ ತಂದೆ ನಮಗೆ ಸರಿಯಾದ ಬುದ್ದಿ ಕಲಿಸಿದ್ದಾರೆ; ನಿಮ್ಮಿಂದ ನಾವು ಕಲಿಯಬೇಕಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್ ಕೇಂದ್ರ ಕಚೇರಿ ‘ಜೆಪಿ ಭವನ’ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವೇಗೌಡರ ಹೆಸರೇಳಿ ನಿಮ್ಮ ಮಗನಿಗೆ ಬುದ್ದಿ ಹೇಳಿ ಅಂದಿದ್ದಾರೆ, ನಿಮ್ಮಿಂದ ನಾವು ಕಲಿಯಬೇಕಿಲ್ಲ, ನಮ್ಮ ತಂದೆ ನಮಗೆ ಸರಿಯಾದ ಬುದ್ದಿ ಕಲಿಸಿದ್ದಾರೆ’ ಎಂದು ತಿರುಗೇಟು ಕೊಟ್ಟರು.
‘ಪ್ರಾದೇಶಿಕ ಪಕ್ಷ ನಡೆಸುವುದು ಎಷ್ಟು ಕಷ್ಟ ಎಂಬುದು ಮಾತಾಡೋವ್ರಿಗೆ ಏನು ಗೊತ್ತು? ಹೌದು, ರಾಜಕೀಯ ಮಾಡಲು ಹಣ ಬೇಕು. 2004ರ ಚುನಾವಣೆಯಲ್ಲಿ ಬಡ್ಡಿ ಚನ್ನಪ್ಪನಿಂದ ಎಷ್ಟು ಸಾಲ ತಂದ್ರು ಅನ್ನೋದು ಗೊತ್ತಿಲ್ವಾ? ಅಂದು ಅವರು ದೇವೇಗೌಡರು ಪ್ರಧಾನಿ ಆಗಿದ್ದರು, ಆಗ ಸಿದ್ದರಾಮಯ್ಯ ಈ ಪಕ್ಷದಲ್ಲಿ ಇರಲಿಲ್ವಾ’ ಎಂದು ಪ್ರಶ್ನಿಸಿದರು.
ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವಿವಾದದ ಬಗ್ಗೆ ಮಾತನಾಡಿದ ಅವರು, ‘ಯಾರು ವಿವೇಕಾನಂದ, ಮಹದೇವ ಯಾರು ಅನ್ನೋದನ್ನ ಮಾಧ್ಯಮದವರು ಬಿತ್ತನೆ ಮಾಡಿದ್ದೀರ. ಜನರ ಕಷ್ಟ-ಸುಖಕ್ಕೆ ತ್ಯಾಗ ಮಾಡಿ, ಎಮ್ ಎಲ್ ಎ ಆಗದೇ ಇದ್ದರೂ ಯತೀಂದ್ರ ಜನರ ಸೇವೆ ಮಾಡ್ತಾ ಇದ್ದಾರೆ. ಹತಾಷೆಯಿಂದ ಕುಮಾರಸ್ವಾಮಿ ಹೀಗೆ ಮಾತಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ನಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಸದಾ ವರ್ಗಾವಣೆ ದಂಧೆಯಲ್ಲಿ ಇದ್ದೆ ಎಂದೂ ಹೇಳಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಕೋಆರ್ಡಿನೇಷನ್ ಕಮಿಟಿಲಿ ನೀವು ಇದ್ರಲ್ವಾ? ಆಗ ಅಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ್ರಾ, ಕಾಫಿ-ಟೀಗೆ ಎಂದು ಕರೀತಾ ಇದ್ರಲಾ ವರ್ಗಾವಣೆ ದಂಧೆ ಬಗ್ಗೆ ಮಾತಾಡಿದ್ರಾ ಸಿದ್ದರಾಮಯ್ಯ ಅವರೇ’ ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ; ವಿಪಕ್ಷ ನಾಯಕನಾಗಿ ಜವಾಬ್ದಾರಿ ನಿರ್ವಹಿಸಲು ನಾನು ಸಿದ್ಧ: ಆರಗ ಜ್ಞಾನೇಂದ್ರ
‘ಯತೀಂದ್ರ ವಿಡಿಯೋ ವಿವಾದದ ಬಗ್ಗೆ ನಾನು ಆರೋಪ ಮಾಡಿದ ಮೂರು ಗಂಟೆವರೆಗೆ ಯಾಕೆ ಸಿಎಂ ಬಾಯಿ ಬಿಚ್ಚಲಿಲ್ಲ? ಸಿಎಸ್ ಆರ್ (Corporate Social Responsibility) ಫಂಡ್‌ದು ಎಂದು ಬೆಳಗ್ಗೆನೇ ಹೇಳಬಹುದಿತ್ತಲ್ಲವೇ? ಯಾರಾದ್ರೂ ₹2.5 ಲಕ್ಷ ಸಿಎಸ್ ಆರ್ ಫಂಡ್ ತಗೋತಾರಾ? ಇದನ್ನು ನಾನು ವಿಧಾನಸಭೆಯಲ್ಲೂ ಇಡ್ತೀನಿ. ನೀವು ನನ್ನ ಬಗ್ಗೆ ಏನು ಬೇಕಾದ್ರೂ ಮಾತಾಡಿ. ನಾನು ವಿಪಕ್ಷದಲ್ಲಿ ಇದ್ದೀನಿ, ಏನೇ ಮಾತಾಡಿದ್ರೂ ಅದನ್ನ ಸಮಚಿತ್ತವಾಗಿ ಸ್ವೀಕಾರ ಮಾಡ್ತೀನಿ’ ಎಂದು ಸವಾಲು ಹಾಕಿದರು.
‘ಸಿದ್ದರಾಮನ ಹುಂಡಿ ಶಾಲೆಗೂ ಅನುದಾನ ಕೊಟ್ಟಿಲ್ವಲ್ವಾ? ಈ ಕಥೆನೂ ಹೂಬ್ಲೋಟ್ ವಾಚ್ ತರನೇ. ಉತ್ತರ ಕೊಟ್ಟರೆ ಜನರಿಗೆ ಮನವರಿಕೆ ಆಗಬೇಕು. ದೇವರು ದೊಡ್ಡವನು, ನಾನು ಸಿಎಂ ಆಗಿದ್ದಾಗ ಒಂದು ದಿನವೂ ನನ್ನ ಮಗ ಕಚೇರಿಗೂ ಬರಲಿಲ್ಲ. ಲೋಕಸಭೆಗೂ ನಿಂತಿದ್ದ, ಮೊನ್ನೆ ರಾಮನಗರಕ್ಕೂ ನಿಂತಿದ್ದ. ನಾನು ಮಗನಿಗೆ ಕಚೇರಿ ನೋಡ್ಕೋ, ಕ್ಷೇತ್ರ ನೋಡ್ಕೋ ಎಂದು ಹೇಳಿದ್ನಾ’ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.
‘ನನ್ನನ್ನ ಹೆದರಿಸುತ್ತೇನೆ ಅಂದುಕೊಂಡರೆ ಅದು ಸಾಧ್ಯವಿಲ್ಲ; ಕ್ಯಾಬಿನೆಟ್ ಸಭೆ ಆದ ಮೇಲೆ ಯಾರ್ಯಾರು ಸೇರಿದ್ರಿ, ಕುಮಾರಸ್ವಾಮಿ ಅವರನ್ನ ಹೇಗೆ ಕಟ್ಟಿ ಹಾಕಬೇಕು ಎಂದು ಏನೇನು ಮಾತಾಡಿದ್ರಿ ಎಂಬುದೂ ಗೊತ್ತಿದೆ. ಬಿಡದಿ ಜಮೀನಿನ ಬಗ್ಗೆ ತನಿಖೆ ಆಗಬೇಕು ಅಂತಲೂ ನನ್ನ ಹಳೆಯ ಸ್ನೇಹಿತರು ಹೇಳಿದ್ದಾರೆ. ಆ ಜಮೀನು ನಾನು ಖರೀದಿಸಿ 38 ವರ್ಷ ಆಯ್ತು. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಇಲ್ಲಿಯ ವರೆಗೂ ಎಷ್ಟು ತನಿಖೆ ಆಯ್ತು ಎಂದು ಒಂದು ಪುಸ್ತಕವನ್ನೇ ಬರೀಬಹುದು’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.