ಬೆಂಗಳೂರು: ‘ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ; ನನಗೆ 91ವರ್ಷ ಆಯ್ತು, ನಮ್ಮ ಗುರಿ ಪ್ರಾದೇಶಿಕ ಪಕ್ಷ ಉಳಿಸೋದು. ನಮಗೆ ಯಾವ ಪಕ್ಷದ ಮೇಲೂ ದ್ವೇಷ ಇಲ್ಲ. ನಮ್ಮ ಪಕ್ಷವನ್ನ ಸಂಘಟನೆಗೊಳಿಸಿ, ಉಳಿಸಬೇಕೆಂದು ಕೆಲಸ ಮಾಡ್ತಿದೇವೆ, ಇನ್ನೂ ಮುಂದೆ ನಾನು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ (ಜೆಡಿಎಸ್) ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದರು.
ಜೆಡಿಎಸ್ ಕೇಂದ್ರ ಕಚೇರಿ ‘ಜೆಪಿ ಭವನ’ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ. ದೇವೇಗೌಡ, ‘ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ರಾಜ್ಯದ ಎಲ್ಲ ವರ್ಗದವರಿಗೂ ಸೌಲಭ್ಯ ಸಲ್ಲಬೇಕು ಎಂದು ನಿರ್ಧಾರ ಮಾಡಿದ್ದೆವು. ಇದೀಗ ಲೋಕಸಭೆ ಚುನಾವಣೆ ಸಂಬಂಧ ನಮ್ಮ 19 ಜನ ಶಾಸಕರು, ಎಂಟು ಜನ ಎಮ್‌ಎಲ್‌ಸಿಗಳು ಸೇರಿಸಿಕೊಂಡು ಸಭೆ ಮಾಡಿದ್ದೇವೆ. ಜಿ.ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ 12 ಜನರ ಕೋರ್ ಕಮಿಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಲಾಗುತ್ತದೆ. ನನ್ನ ಈ 91ನೇ ವಯಸ್ಸಿನಲ್ಲಿ ಕಿಂಚಿತ್ತು ಸೇವೆ ಸಲ್ಲಿಸಲು ತಯಾರಿದ್ದೀನಿ’ ಎಂದು ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದರು.
‘ನಮ್ಮ ಈ ಹೋರಾಟದಲ್ಲಿ ಯಾರ ಬಗ್ಗೆಯೂ ಮಾತಾಡಲ್ಲ; ಆದರೆ, ನನಗೆ ಜೀವನದ ಅನುಭವ ಇದೆ. ಆ ಅನುಭವವನ್ನ ನನ್ನ ಗೆಳೆಯರಿಗೆ ಹೇಳ್ತೀನಿ. ರಾಜ್ಯ ಪ್ರವಾಸ ಯಾರ್ಯಾರು ಮಾಡಬೇಕು ಅಂತ ಕಮಿಟಿ ತೀರ್ಮಾನ ಮಾಡುತ್ತೆ. ನಮಗೆ ಯಾರ ಬಗ್ಗೆಯೂ ಆಕ್ಷೇಪ ಇಲ್ಲ. ಏಕೆಂದರೆ, ನಾವು ಇಲ್ಲಿ ಸೇರಿರುವುದು ಪ್ರಾದೇಶಿಕ ಪಕ್ಷ ಉಳಿಸಲು’ ಎಂದು ಹೇಳಿದರು.
ಇದನ್ನೂ ಓದಿ; ಕಾರಣ ನೀಡದೆ ಪ್ರತಿಭಟನೆ ಮುಂದೂಡಿದ ಬಿಜೆಪಿ; ರಾಜ್ಯ ನಾಯಕರಿಗೆ ಕಾಡ್ತಿದ್ಯಾ ನಾಯಕತ್ವದ ಕೊರತೆ?
‘ಎರಡು ರಾಷ್ಟ್ರೀಯ ಪಕ್ಷಗಳ ಹೋರಾಟದ ಮಧ್ಯೆ ನಾವು ನಮ್ಮ ಶಕ್ತಿ ತೋರಿಸಬೇಕಿದೆ; ಕುಮಾರಸ್ವಾಮಿ ಅವರು ಶಾಸಕಾಂಗ ಪಕ್ಷದ ನಾಯಕರು. ಅವರ ತೀರ್ಮಾನದಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂಬುದು ಗೊತ್ತಿದೆ. ಒಂದು ಕಡೆ ಬಿಜೆಪಿ, ಮತ್ತೊಂದು ಕಡೆ ಕಾಂಗ್ರೆಸ್. ಇವೆರಡರ ನಡುವೆ ನಮ್ಮ ಪಕ್ಷ ಉಳಿಸಬೇಕಿದೆ. ಹೀಗಾಗಿಯೇ ನಾನು ಇಂದು ಪಕ್ಷದ ಕಚೇರಿಗೆ ಬಂದಿದ್ದೇನೆ’ ಎಂದು ಗೌಡರು ವಿವರಿಸಿದರು.
‘ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆ ಆಗ್ತಾ ಇದೆ ಅಂತ ಕೇಳಿದ್ರಿ. ಆದರೆ, ನಮ್ಮ ಕೋರ್ ಕಮಿಟಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯ್ತಿ, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿಯೇ ರಚನೆ ಮಾಡಿರೋದು. ಬಹಳ ಜನ ಪಕ್ಷ ಬಿಟ್ಟು ಹೋಗ್ತಾರೆ ಅಂದ್ರು, ಹಾಗಾದ್ರೆ ಯಾರು ಹೋಗೋದು? ದಯಮಾಡಿ ಇಂಥವರು ಹೋಗ್ತಾರೆ ಅಂತ ಹೇಳಿ ನಮಗೆ. ನಾವು ಸರಿ ಮಾಡುವ ಕೆಲಸ ಮಾಡ್ತೀವಿ. ಹೀಗೆ ಊಹಾಪೋಹದ ಬಗ್ಗೆ ಮಾತಾಡಬೇಡಿ; ಪ್ರಾದೇಶಿಕ ಪಕ್ಷ ಉಳಿಸಬೇಕಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ನಿರಾಣಿ ವಿರುದ್ಧ ತೊಡೆ ತಟ್ಟಿದ್ದ ರೈತನ ಮೇಲೆ ಮಾರಣಾಂತಿಕ ಹಲ್ಲೆ!
‘ಪ್ರಾದೇಶಿಕ ಪಕ್ಷ ತುಳಿಯುವ ಕೆಲಸ ಆಗ್ತಾ ಇದೆ; ಈ ಪ್ರಾದೇಶಿಕ ಪಕ್ಷ ಉಳಿಸಬೇಕು ಅಂತನೇ ಇಲ್ಲಿ ಬಂದಿದ್ದೇನೆ. ಮಹದಾಯಿ, ಕಾವೇರಿ ಬಗ್ಗೆ ಮಾತಾಡಬಹುದು. ಆದರೆ, ಈಗ ಮಾತಾಡಲ್ಲ. ದೇವೇಗೌಡರು ಮನೆಯಲ್ಲಿ ಕೂರ್ತಾರೆ ಅಂದುಕೊಳ್ಳಬಹುದು. ಇವತ್ತು ಒಳ್ಳೆ ದಿನ ಅಂತ ದೀಪ ಹಚ್ಚಿದ್ದೇವೆ. ಪಕ್ಷ ಸಂಘಟನೆ ಜವಬ್ದಾರಿ ನಾನು ತೆಗೆದುಕೊಳ್ತೀನಿ ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಎಲ್ಲಿ ಲೋಕಸಭೆಗೆ ನಿಲ್ಲಬೇಕು, ಎಲ್ಲಿ ತಾಲೂಕು, ಜಿಲ್ಲಾ ಪಂಚಾಯತ್ ಗೆ ನಿಲ್ಲಬೇಕು ಅಂತ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ’ ಎಂದು ಅವರು ಮಹತ್ವದ ಘೋಷಣೆ ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.