ಬೆಂಗಳೂರು : ಕಳೆದ ಐದು ವರ್ಷಗಳಲ್ಲಿ ದಾಖಲಾದ 10,893 ಪ್ರಕರಣಗಳಲ್ಲಿ 1100 ಪ್ರಕರಣಗಳ ಬಗ್ಗೆ 120 ದಿನಗಳಾದರೂ ಚಾರ್ಜ್ ಶೀಟ್ ಹಾಕಿಲ್ಲ. ಇದು ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಅಧಿಕಾರಿಗಳ ಅಸಡ್ಡೆಯನ್ನು ತೋರಿಸುತ್ತದೆ. ಇದರಿಂದ ಸಂತ್ರಸ್ತರಿಗೆ ನ್ಯಾಯ ಕೊಡಿಸಿದಂತಾಗುವುದಿಲ್ಲ. ಇನ್ನುಮುಂದೆ ಇಂತಹ ನಡವಳಿಕೆ ಸಹಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಕುರಿತ ಅಂಕಿ-ಅಂಶಗಳನ್ನು ಇಟ್ಟುಕೊಂಡು ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಅಲ್ಲದೆ, ಜಾತಿ ದೌರ್ಜನ್ಯ ಪ್ರಕರಣಗಳ ತನಿಖೆಯ ಪ್ರಗತಿಯ ಕುರಿತು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಶಿಕ್ಷೆಯ ಪ್ರಮಾಣವು 3.44% ಇದೆ. ಅಂದರೆ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷೆ ವಿಧಿಸುವ ಪ್ರಮಾಣದಲ್ಲಿ ದೇಶದಲ್ಲಿಯೇ ರಾಜ್ಯವೂ 21ನೇ ಸ್ಥಾನದಲ್ಲಿದೆ. ಶಿಕ್ಷೆ ಪ್ರಮಾಣ ಕಡಿಮೆ ಇರುವುದರಿಂದ ದೌರ್ಜನ್ಯವೆಸಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಅಡಿಯಲ್ಲಿ ಪ್ರಕರಣ ದಾಖಲಾದ 90 ದಿನಗಳೊಳಗೆ ಚಾರ್ಜ್ ಶೀಟ್ ಹಾಕದಿದ್ದರೆ, ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಗುತ್ತದೆ. ಹೀಗೆ ಸುಲಭಕ್ಕೆ ಜಾಮೀನು ಪಡೆದವರಿಗೆ ಕಾನೂನಿನ ಭಯವಿರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್ ಒನ್ ಆಗಿದ್ದಾರೆ. ಆದರೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷೆ ಪ್ರಮಾಣ ಕೇವಲ ಶೇ 3.44 ಇದೆ. ಅಂದರೆ ಪೊಲೀಸ್ ಇಲಾಖೆ ಕಳೆದ ಐದು ವರ್ಷಗಳಲ್ಲಿ ಎಸ್ ಸಿ/ಎಸ್ ಟಿ ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಸ್ಪಷ್ಟ. ಪೊಲೀಸ್ ಇಲಾಖೆಯ ಈ ನಡೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ, ಎಸ್.ಪಿ. ಹಾಗೂ ಡಿಸಿಪಿ ಗಳನ್ನು ನೇರವಾಗಿ ಹೊಣೆ ಮಾಡಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಿಎಂ ಪೊಲೀಸ್ ಇಲಾಖೆ ವಿರುದ್ಧ ಗುಡುಗಿದರು.
ಇದನ್ನೂ ಓದಿ : 6 ರಾಜ್ಯಗಳ ವಿಧಾನಸಭಾ ಉಪ ಚುನಾವಣೆ ಫಲಿತಾಂಶ ಇಂದು ಪ್ರಕಟ
ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗಳಲ್ಲಿ ದೌರ್ಜನ್ಯ ಪ್ರಕರಣಗಳ ಪ್ರಗತಿ ಪರಿಶೀಲನೆ ಮಾಡುವ ಕುರಿತು ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾಧಿಕಾರಿಗಳೂ ಕಡ್ಡಾಯವಾಗಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಮತ್ತೊಂದು ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಕೆಡಿಪಿ ಸಭೆಗಳಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳ ರಿವ್ಯೂ (ಪರಿಶೀಲನೆ) ನಡೆಸದ ಕಾರಣದಿಂದ ಹೀಗಾಗುತ್ತದೆ. ಆದ್ದರಿಂದ ಶಾಸಕರು, ಜಿಲ್ಲಾ ಸಚಿವರು, ಡಿಸಿ-ಎಸ್ ಪಿ ಗಳು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.