ಬೆಂಗಳೂರು: ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ ರಚಿಸುವ ಮೂಲಕ ನಮ್ಮ ಕೈ ಕಟ್ಟಿ ಹಾಕಲಾಗಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನೀರಿನ ವಿಚಾರವನ್ನ ಪ್ರತಿಯೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಕೆಆರ್‌ಎಸ್ ಡ್ಯಾಂನ ಇವತ್ತಿನ ಮಟ್ಟ 97 ಅಡಿ ಇದೆ. ಕಬಿನಿಯಲ್ಲಿ 5.1 ಟಿಎಂಸಿ ನೀರಿದೆ. ಒಟ್ಟು 43.19 ಟಿಎಂಸಿ ನೀರು ಶೇಖರಣೆ ಇದೆ. ಒಪ್ಪಂದದ ಪ್ರಕಾರ ತಮಿಳುನಾಡಿಗೆ 120 ಟಿಎಂಸಿ ನೀರು ಬಿಡಬೇಕಾಗಿತ್ತು. ಸೆಪ್ಟೆಂಬರ್ ಹೊತ್ತಿಗೆ 33 ಟಿಎಂಸಿ ಹರಿಸಬೇಕಾಗಿತ್ತು’ ಎಂದು ಮಾಹಿತಿ ನೀಡಿದರು.
‘ನದಿ ನೀರು ಹಂಚಿಕೆಯಲ್ಲಿ ಸಿಡಬ್ಯೂಆರ್‌ಸಿ ಪ್ರಮುಖ ಪಾತ್ರ ವಹಿಸುತ್ತದೆ, ನೀರು ಬಿಡೋದೆ ಅವರ ಕೆಲಸ. 2018ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಪ್ರಧಾನಂಂತ್ರಿಗಳು ಒಂದು ಗೆಜೆಟ್ ಮಾಡ್ತಾರೆ. ಆಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಆಗುತ್ತೆ. ಅಲ್ಲಿಗೆ ನಮ್ಮ ಕೈ ಕಟ್ಟಿ ಹಾಕಲಾಗುತ್ತೆ. 114 ಕ್ರಸ್ಟ್ ಗೇಟ್‌ಗಳೂ ಕೂಡ ಎಲೆಕ್ಟ್ರಿಕ್ ಕಂಟ್ರೋಲ್ ಗೇಟ್ ಆಗಿವೆ. ದೆಹಲಿಯಲ್ಲೇ ಕುಳಿತು ಎಲ್ಲವನ್ನೂ ಕಂಟ್ರೋಲ್ ಮಾಡಲಾಗುತ್ತೆ. ಈ ತರಹ ವ್ಯವಸ್ಥೆ ಎಲ್ಲವೂ ಕೇಂದ್ರ ಸರ್ಕಾರವೇ ಮಾಡಿದೆ’ ಎಂದು ಹೇಳಿದರು.
ಇದನ್ನೂ ಓದಿ; ಜನ-ಜಾನುವಾರುಗಳನ್ನು ಸಂಕಷ್ಟಕ್ಕೆ ದೂಡಿ ನೀರು ಹರಿಸಲು ಸಾಧ್ಯವಿಲ್ಲ: ಸಿಎಂ
‘ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಹಾಕಲಾಗಿದೆ. ರಾಜ್ಯದ ಪರ ನಿಲ್ಲಬೇಕಾದವರು ಕೇಂದ್ರದಲ್ಲಿ ಸರ್ಕಾರ ಮಾಡೋರು. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸುಖಾಸುಮ್ಮನೇ ಹೇಳಿಕೆ ಕೊಡ್ತಾರೆ. ಸರ್ವಪಕ್ಷಗಳ ತುರ್ತು ಸಭೆ ಕರೆದರೆ ಯಾರೂ ಬರಲ್ಲ. ಮಧ್ಯರಾತ್ರಿ ಆಹ್ವಾನ ಬಂತು ಎಂದು ಬೊಮ್ಮಾಯಿ ಹೇಳ್ತಾರೆ; ನಿಮಗೆ ನಾಚಿಕೆ ಆಗಬೇಕು’ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯ ಅವರು ಬಹಳ ಸ್ಪಷ್ಟವಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ, ಇವರು ಪ್ರತಿದಿನ ಕಾಂಗ್ರೆಸ್ ಮೇಲೆ ಮುಗಿ ಬೀಳ್ತಾರೆ. ತಮಿಳುನಾಡಿನ ಅಣ್ಣಾಮಲೈ ಅವರಿಗೆ ಪ್ರಾಮುಖ್ಯತೆ ಕೊಡ್ತಾರೆ. ಆದರೆ, ಒಂದು ರಾಜ್ಯದ ಮುಖ್ಯಮಂತ್ರಿಗೆ ಪ್ರಧಾನ್ಯತೆ ಕೊಡಲ್ಲ. ಇದೀಗ 43 ಟಿಎಂಸಿ ನೀರಿದೆ. ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಬೇಕಾಗಿದೆ. ಮಂಡ್ಯ, ಬೆಂಗಳೂರು ಸೇರಿದಂತೆ ಕುಡಿಯಲು 3.8 ಕೋಟಿ ಜನರು ಕಾವೇರಿಯನ್ನೇ ನಂಬಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಸರಿಯಾಗಿ ವಾದ ಮಾಡ್ತಾ ಇಲ್ಲ ಅಂತಾರೆ. ಅನ್‌ಲೈನಲ್ಲಿ ನಾವು ಎಲ್ಲವನ್ನೂ ಮಾಡುತ್ತಿದ್ದೇವೆ. ರಾಜಕೀಯ ಮಾಡಿ, ಆದ್ರೆ ಜನರನ್ನ ದಾರಿ ತಪ್ಪಿಸೋ ಕೆಲಸ ಮಾಡಬೇಡಿ. ಎಲ್ಲಿ ತಪ್ಪು ಮಾಡಿದ್ದೇವೆ ಎಂದು ನೇರವಾಗಿ ಬಂದು ತೋರಿಸಿ’ ಎಂದು ಕಿಡಿಕಾರಿದರು.
ಇದನ್ನೂ ಓದಿ; 2024ರ ಚುನಾವಣೆಗೆ ಜನಸೇನಾ-ಟಿಡಿಪಿ ಮೈತ್ರಿ; ಪವನ್ ಕಲ್ಯಾಣ್ ಘೋಷಣೆ
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ 43 ಪರ್ಸೆಂಟ್ ವೋಟ್ ಶೇರಿಂಗ್ ಕಾಂಗ್ರೆಸ್ ಪರವಾಗಿದೆ. ಬಿಜೆಪಿ ಶೇ.36 ಹಾಗೂ ಜೆಡಿಎಸ್‌ಗೆ ಶೇ.7 ರಷ್ಟು ವೋಟ್ ಬಂದಿತ್ತು. ಬಿಜೆಪಿ-ಜೆಡಿಎಸ್ ಒಂದಾದ್ರೆ ನಮಗೆ ನೂರಕ್ಕೆ ನೂರು ಪರ್ಸೆಂಟೇಜ್ ವೋಟ್ ಶೇರ್ ಆಗುತ್ತೆ. ಬಿಜೆಪಿ ಜೆಡಿಎಸ್‌ಗೆ ಹಿಂದೆ ಪಾಪ ಎಂದುಕೊಂಡು ಜನ ವೋಟ್ ಹಾಕಿದ್ರು. ಈಗ ಅವರೆಲ್ಲಾ ಕಾಂಗ್ರೆಸ್‌ಗೆ ಶಿಫ್ಟ್ ಆಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜನೆ ಮಾಡ್ತೀನಿ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ, ಎಲ್ಲಿ ಮಾಡಿದ್ರಿ ಸ್ವಾಮಿ? ಮೈತ್ರಿ ಮಾಡಿಕೊಂಡು ಬಿಜೆಪಿಯ ‘ಬಿ ಟೀಂ’ ಎಂದು ಸಾಬೀತು ಮಾಡಿದ್ರಿ. ಬಿಜೆಪಿಯವರ ಯೋಗ್ಯತೆಗೆ ಒಬ್ಬ ಅಧ್ಯಕ್ಷನನ್ನು ಆಯ್ಕೆ ಮಾಡೋದಕ್ಕೆ ಆಗಿಲ್ಲ. ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ಪಾಪ ಆರ್. ಅಶೋಕ್ ರಿಹರ್ಸಲ್ ಮಾಡಿಕೊಂಡು ಬಟ್ಟೆ ಹರಿದುಕೊಳ್ತಾ ಇದ್ದಾರೆ. ಅಶ್ವತ್ಥ ನಾರಾಯಣ ಕಾಂಗ್ರೆಸ್ ಪಕ್ಷವನ್ನು ಭ್ರಷ್ಟ ಎಂದು ಹೇಳ್ತಾರೆ.. ನಿಮಗಿಂತ ಭ್ರಷ್ಟ ಎಲ್ಲಿದ್ದಾರೆ ಸ್ವಾಮಿ’ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.