ಹುಬ್ಬಳ್ಳಿ : ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ ಎರಡು ಬಣಗಳ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ.
ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಕೆಲ ಸದ್ಯಸ್ಯರು ನಡೆಸುತ್ತಿರುವ ಧರಣಿ ಮುಂದುವರಿದಿದೆ. ನಿನ್ನೆಯಿಂದ (ಸೆ.14) ಪಾಲಿಕೆ ಸದಸ್ಯರು ಧರಣಿ ನಡೆಸುತ್ತಿದ್ದು, ರಾತ್ರಿಯಿಡೀ ಪಾಲಿಕೆ ಆಯುಕ್ತರ ಕಚೇರಿಯಲ್ಲೇ ಕಾಲ ಕಳೆದಿದ್ದಾರೆ. ಪ್ರತಿಭಟನಾ ನಿರತರನ್ನು ಇಂದು ಬೆಳಿಗ್ಗೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಕಳೆದ ವರ್ಷದಂತೆ ಈ ವರ್ಷವೂ ಚನ್ನಮ್ಮ (ಈದ್ಗಾ ಮೈದಾನ) ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು. ಈ ಬಗ್ಗೆ ಆಗಸ್ಟ್ 31ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸರ್ವ ಸಮ್ಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ಆದರೆ, ಸರ್ಕಾರದ ಕುಮ್ಮಕ್ಕಿನಿಂದ ಪಾಲಿಕೆ ಆಯುಕ್ತರು ಅನುಮತಿ ಕೊಡ್ತಿಲ್ಲ. ನಿನ್ನೆ ಬೆಳಿಗ್ಗೆಯಿಂದ ಶಾಸಕರು, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ದೊರೆತಿಲ್ಲ. ನಾವು ಕಾನೂನು ಹೋರಾಟ ಮಾಡಲು ಸಿದ್ದರಿದ್ದೇವೆ. ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡುವಾಗಲೂ ಅನುಮತಿ ನೀಡಲು ವಿಳಂಬ ಮಾಡಿದ್ದರು. ಕೇವಲ ಗಣಪತಿ ಹಬ್ಬ ಅಲ್ಲ, ಮೈದಾನದಲ್ಲಿ ಎಲ್ಲಾ ಆಚರಣೆಗಳಿಗೆ ಅನುಮತಿ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಈದ್ಗಾ ಮೈದಾನದಲ್ಲಿ ಅನುಮತಿ ಕೊಡಲಿ ಬಿಡ್ಲಿ, ಗಣೇಶ ಪ್ರತಿಷ್ಠಾಪನೆ ಮಾಡೋದು ಫಿಕ್ಸ್
ಅಂಜುಮನ್ ಸಂಸ್ಥೆಯವರು ಅನುಮತಿ ಕೊಡಬಾರದು ಎಂದು ಕಳೆದ ಬಾರಿ ಕೂಡ ಕೋರ್ಟ್ ಗೆ ಹೋಗಿದ್ದರು. ಆಗ ಎಲ್ಲಾ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಬಗ್ಗೆ ಪಾಲಿಕೆ ನಿರ್ಧಾರ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಇದು ಗೊತ್ತಿದ್ದೂ ಅಂಜುಮನ್ ಸಂಸ್ಥೆಯವರು ಪದೇ ಪದೇ ಕೋರ್ಟ್ ಗೆ ಹೋಗೋದು ಸರಿಯಲ್ಲ. ಏನೇ ಆಗಲಿ ನಾವು ಗಣಪತಿ ಕೂರಿಸೇ ಕುರಿಸ್ತೀವಿ ಎಂದರು.
ಇಂದು ಅರ್ಜಿ ವಿಚಾರಣೆ : ಇಂದು ಧರಣಿ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ನಡುವೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿರೋಧಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಬೆಳಿಗ್ಗೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ನಡೆಯಲಿದೆ. ಮತ್ತೊಂದೆಡೆ ಹಕ್ಕುಚ್ಯುತಿ ಪ್ರಶ್ನೆ ಮಾಡಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲಗುಂಟ್ಲಾ ಕೂಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಕೂಡ ಇಂದು ವಿಚಾರಣೆಗೆ ಬರಲಿದೆ. ಹಾಗಾಗಿ, ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ ನೆಟ್ಟಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.