ರಾಮನಗರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೋ ಯಾತ್ರೆ’ಯ ವಾರ್ಷಿಕೋತ್ಸವ ಪ್ರಯುಕ್ತ ಇಂದು ನಗರದಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿಯಿಂದ ಐಜೂರು ವೃತ್ತದವರೆಗೆ ಸುಮಾರು ನಾಲ್ಕು ಕಿ.ಮೀ ದೂರ ನಡೆದ ಪಾದಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.


ಪಾದಯಾತ್ರೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿ ಸಂಘ ಪರಿವಾರ ಮಹಾತ್ಮಗಾಂಧಿಯನ್ನು ಹತ್ಯೆಗೈದವರ ವಂಶಸ್ಥರು. ಮೋದಿ ಅವರು ಪ್ರಧಾನಿ ಆದ ಬಳಿಕ ಭಾರತೀಯರ ಭಾವನೆಗಳನ್ನು ಕೆರಳಿಸಿ ಪರಸ್ಪರ ವಿಭಜಿಸಿ ಮತಬ್ಯಾಂಕ್ ಗಿಟ್ಟಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈಗ ನಾವು ಅಧಿಕಾರಕ್ಕೆ ಬಂದಿದ್ದೇವೆ. ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವಕ್ಕೆ ಜಿಲ್ಲೆಯ ಜನ ಸಾಕ್ಷಿಯಾಗುತ್ತಿದ್ದಾರೆ. ಸಂಸದ ಡಿ.ಕೆ.ಸುರೇಶ್ ಒಳ್ಳೆಯ ಕೆಲಸ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾದರೂ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.
ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ನಾನು ರಾಜಕಾರಣ ಮಾಡಲು ಇಲ್ಲಿಗೆ ಬಂದಿಲ್ಲ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಲವರು ಬಂದು ನನ್ನನ್ನು ಭೇಟಿ ಮಾಡಿದ್ದೀರಿ. ರಾಮನಗರ ಏನೋ ಸ್ಟ್ರೈಕ್ ಅಂತೆ, ಬಂದ್ ಅಂತೆ. ಬಂದ್ ಮಾಡಿ ಯಾರು ಬೇಡ ಅಂತಾರೆ, ಮೆಡಿಕಲ್ ಯುನಿವರ್ಸಿಟಿ ಆಗಬೇಕು ಅಂತ ಹೇಳಿದ್ರು, ಯಾಕೆ ಮಾಡಲಿಲ್ಲ? ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕನಕಪುರದಲ್ಲಿ ಆಸ್ಪತ್ರೆ ಮಾಡಿರಲಿಲ್ವಾ ಎಂದು ಪ್ರಶ್ನಿಸಿದರು.


ಸಿಎಂ ಡಿಸಿಎಂ ಮತ್ತು ಕೈ ನಾಯಕರ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಂತೆ ಅದ್ದೂರಿ ಸ್ವಾಗತ ಕೋರಲಾಯಿತು. ಕ್ರೇನ್ ಮೂಲಕ ಬೃಹತ್ ರೇಷ್ಮೆ ಹಾಗೂ ಸೇಬಿನ ಹಾರವನ್ನು ಸ್ಥಳೀಯ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಕಿ ಬರಮಾಡಿಕೊಂಡರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.