ರಾಮನಗರ : ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಸಮಾವೇಶದಲ್ಲಿ ಮಾತನಾಡಿ, ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಕ್ಷೇತ್ರ. ಕಳೆದ ಬಾರಿ ನಿಮ್ಮ ಒತ್ತಾಯಕ್ಕೆ ಮಣಿದು ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಎರಡೂ ಕಡೆ ನಿಂತೆ ಎಂದರು.
ಚುನಾವಣೆ ಸಮಯದಲ್ಲಿ ಬಹಳ ಜನ ನನ್ನ ಮೇಲೆ ಅಪಪ್ರಚಾರ ಮಾಡ್ತಿದ್ರು. ಚನ್ನಪಟ್ಟಣದಲ್ಲಿ ಮತ್ತೆ ನಿಲ್ತಾರೋ.. ಬಿಟ್ಟು ಹೋಗ್ತಾರೋ ಅಂತ ಪ್ರಚಾರ ಮಾಡಿದ್ರು. ನನ್ನ ಕೆಲ ಕ್ಷೇತ್ರದ ಮುಖಂಡರು ಚನ್ನಪಟ್ಟಣ ಜೊತೆಗೆ, ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ರು. ಚನ್ನಪಟ್ಟಣದಲ್ಲಿ ಕುತಂತ್ರದಿಂದಲೇ ನನ್ನ ಸೋಲಿಸಬಹುದು ಅಂತ ಆ ಮಾತು ಹೇಳಿದ್ರು. ಆದ್ರೆ ನಾನು ಹೇಳಿದ್ದು ಟೂರಿಂಗ್ ಟಾಕೀಸ್ ಅಲ್ಲಪ್ಪಾ ಅಂತ.
ನಾನು ನಾಮಪತ್ರ ಸಲ್ಲಿಸೋಕೆ ಮಾತ್ರ ಬಂದೆ, ಮತ ಕೇಳೋಕೆ ಬರಲಿಲ್ಲ. ಆದರೂ ಎರಡೂ ಕ್ಷೇತ್ರದ ಜನತೆ, ಕಾರ್ಯಕರ್ತರ ಶ್ರಮದಿಂದ ಜಯಗಳಿಸಿದೆ. ರಾಜಕೀಯವಾಗಿ ರಾಜ್ಯದಲ್ಲೇ ಇತಿಹಾಸ ನಿರ್ಮಿಸಿದೆ ಎಂದರು. ನಾನು ಸಾಲಮನ್ನಾ ಮಾಡಿದಾಗ ಒಕ್ಕಲಿಗ ಸಮಾಜಕ್ಕೋಸ್ಕರ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ರು.
ನನ್ನ ಬಣ್ಣದಿಂದ ಮಾಧ್ಯಮದವರು ಗೇಲಿ ಮಾಡ್ತಾರೆ. ಮುಖ ಕಪ್ಪು ಇದೆಯೆಂದು ಟ್ರೋಲ್ ಮಾಡ್ತಾರೆ. ಅಲ್ಲ ಸ್ವಾಮಿ ನನಗೂ ಸ್ವಾಭಿಮಾನ ಇದೆ ಎಂದರು. ಕೈ ಮುಗಿದು ಹೇಳ್ತೀನಿ. ನನ್ನ ಬಣ್ಣದ ಬಗ್ಗೆ ಅಲ್ಲ ಕಣ್ರಯ್ಯ ನಮ್ಮ ಪಂಚರತ್ನ ಯಾತ್ರೆಯ ಯೋಜನೆಗಳ ಬಗ್ಗೆ ತೋರಿಸ್ರಯ್ಯಾ ಎಂದು ಮನವಿ ಮಾಡಿಕೊಂಡರು.