ತುಮಕೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ `ಪಂಚರತ್ನ ಯಾತ್ರೆ’ಯಲ್ಲಿ ವಿವಿಧ ಬಗೆಯ ಹಾರಗಳು ಗಮನ ಸೆಳೆದಿದ್ದು ಗೊತ್ತೇ ಇದೆ. ಅಂದಹಾಗೆ ಈ ಹಾರಗಳು ಬಹಳ ಸುದ್ದಿಯಾಗಿದ್ದು, 500 ಬಗೆಯ ವಿಭಿನ್ನ ಹಾರಗಳು ಗಿನ್ನಿಸ್ ದಾಖಲೆ ಮಾಡಿದ್ದು, ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿವೆ.
2023ರ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಕೊತ್ತಂಬರಿ, ಮೋಸಂಬಿ, ಕಬ್ಬು, ಸೌತೆಕಾಯಿ, ಸೇಬು, ದಾಳಿಂಬೆ ಸೇರಿದಂತೆ ಪಂಚರತ್ನ ಯಾತ್ರೆಯಲ್ಲಿ ಅಭಿಮಾನಿಗಳು 500ಕ್ಕೂ ಹೆಚ್ಚು ಬಗೆಯ ಹಾರಗಳನ್ನು ಹಾಕಿದ್ದು, ಗಿನ್ನಿಸ್ ದಾಖಲೆಯಾಗಿದೆ. ಇದು ಏಷ್ಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಮೀಸಲಾತಿ ಕೊಡುವಷ್ಟರಲ್ಲಿ ಸರ್ಕಾರವೇ ಇರಲ್ಲ. ಉತ್ತರಪ್ರದೇಶದಲ್ಲಿ ಈಗಾಗಲೇ ಹೈಕೋರ್ಟ್ ಮೀಸಲಾತಿ ತಿರಸ್ಕಾರ ಮಾಡಿದೆ. ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಬರಬಹುದು. ಬಿಜೆಪಿಯವರು ಚುನಾವಣೆಗಾಗಿ ಈ ರೀತಿ ಮಾಡುತ್ತಿದ್ದಾರೆ.
ಪಂಚಮ ಸಾಲಿಗರು 2ಎ ಸೇರಿಸಿ ಎಂದು ಬೇಡಿಕೆಯಿಟ್ಟರೆ, 2ಡಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ತೆಗೆದುಕೊಂಡ ಈ ತೀರ್ಮಾನ ಹಲವು ಜನಾಂಗವನ್ನು ಎತ್ತಿಕಟ್ಟುವಂತಾಗಿದೆ. ಮೀಸಲಾತಿ ಅನ್ನೋದು ಧ್ವನಿ ಇಲ್ಲದ ವರ್ಗಕ್ಕೆ ಅನುಕೂಲ ಆಗಬೇಕು, ಆದ್ರೆ ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ಜನತೆಗೆ ದ್ರೋಹ ಬಗೆದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದು, ಮೋದಿ ಅವರು ದುಃಖದಿಂದ ಹೊರಗೆ ಬಂದು ದೇಶ ಸೇವೆಗೆ ಮರಳಲಿ ಎಂದು ಕೋರುತ್ತೇನೆ ಎಂದು ಭಾವುಕರಾದರು.