ಬೆಳಗಾವಿ : ಮೀಸಲಾತಿ ಕೊಟ್ಟರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸನ್ಮಾನ ಮಾಡುತ್ತೇವೆ. ಇಲ್ಲದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ಎಲ್ಲರೂ ಹೋರಾಟ ಮಾಡಿದ ಪರಿಣಾಮ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಇಂದಿನ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾಡಿನ ಮೂಲೆ ಮೂಲೆಗಳಿಂದ 25 ಲಕ್ಷ ಜನರು ಆಗಮಿಸುತ್ತಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ನಮ್ಮ ಸಮುದಾಯ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ಇತಿಹಾಸದಲ್ಲಿ ಇಷ್ಟೊಂದು ಸುದೀರ್ಘವಾಗಿ ಹೋರಾಟ ಮಾಡಿದ್ದೇವೆ ಎಂದರು.
ಸಾಮಾಜಿಕ ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮೀಸಲಾತಿ ಘೋಷಣೆ ಮಾಡಿದರೆ, ಇದೇ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಡೈಮಂಡ್ ಕಲ್ಲು ಸಕ್ಕರೆ ತುಲಾಭಾರ ಮಾಡುತ್ತೇವೆ. ಹಸಿರುಶಾಲು ಹಾಕಿ, ಹಳದಿ ರೂಮಾಲು ಸುತ್ತಿ ಸನ್ಮಾನಿಸುತ್ತೇವೆ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಈ ಸಮಾಜದ ಋುಣವನ್ನು ತೀರಿಸುತ್ತಾರೆ ಎನ್ನುವ ಭರವಸೆಯಲ್ಲಿ ನಾವಿದ್ದೇವೆ. ಮೀಸಲಾತಿ ಕೊಟ್ಟರೆ ಸನ್ಮಾನ. ಇಲ್ಲವಾದರೆ ಅವಮಾನ. ಅವಮಾನ ಅಂದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು ಖಚಿತ ಎಂದರು.