ಬೆಂಗಳೂರು/ಬೆಳಗಾವಿ: ಕನ್ನಡ ನಾಡು, ನುಡಿ, ನೆಲ,ಜಲದ ವಿಚಾರದಲ್ಲಿ ನಾಡಿನ ಏಳಿಗೆಗೆ ಶ್ರಮಿಸುತ್ತೇನೆ ಸದನದಲ್ಲಿ ಚರ್ಚೆಗಳು ಅರ್ಥಪೂರ್ಣವಾಗಿರಬೇಕು ಎಂದು ನೂತನ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ನೂತನ ಸಭಾಪತಿಯಾಗಿ ಆಯ್ಕೆಯಾದ ನಂತರ ಸದಸ್ಯರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯಸಭೆ ಮಾದರಿಯಲ್ಲಿ ವಿಧಾನ ಪರಿಷತ್ ಕಲಾಪವನ್ನು ಕ್ರಿಯಾಶೀಲವಾಗಿ ನಡೆಸಲು ಬದ್ಧನಿದ್ದೇನೆ ಎಂದರು. 115 ವರ್ಷದ ಇತಿಹಾಸವಿರುವ ವಿಧಾನ ಪರಿಷತ್ ನಲ್ಲಿ ಸಭಾಪತಿಯಾಗಿ ಕೆಲಸ ಮಾಡಲು ಅವಕಾಶ ನನಗೆ ಒದಗಿ ಬಂದಿದೆ. ಸದನದಲ್ಲಿ ಚರ್ಚೆಗಳು ಅರ್ಥಪೂರ್ಣವಾಗಿರಬೇಕು ಎಂದರು.
ಬಿಜೆಪಿ ಮೇಲೆ ನಂಬಿಕೆ ಇಟ್ಟು ಬಂದು 8ನೇ ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ, ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದ್ದೇನೆ. ಈ ವೇಳೆ ನನ್ನ ರಾಜಕೀಯ ಗುರುಗಳನ್ನು ಸ್ಮರಿಸುತ್ತೇನೆ ಎಂದರು. ರಾಜಕಾರಣ ವೃತ್ತಿಯಾಗದೆ ಸೇವೆಯಾಗಬೇಕು ಎನ್ನುವುದೇ ನನ್ನ ಅಪೇಕ್ಷೆ, ಈ ಹಿಂದೆ ಎರಡು ಬಾರಿ ಸಭಾಪತಿಯಾದಾಗ ಸದಸ್ಯರಿಂದ ಸಿಕ್ಕ ಸಹಕಾರ ಮರೆಯಲಾರೆ, ಮೂರನೇ ಬಾರಿ ಅವಕಾಶ ಸಿಕ್ಕಿದೆ.
ಹೊಸ ದಿಕ್ಕಿನತ್ತ ಸದನವನ್ನು ಕೊಂಡೊಯ್ಯೋಣ, ಸಂವಿಧಾನದ ಬೇರು ಗಟ್ಟಿಗೊಳಿಸಲು ಶುದ್ಧ ಅಂತಃಕರಣದಿಂದ ಯುಕ್ತನಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿ ಹೇಳುತ್ತೇನೆ ಎಂದರು.