ಬೆಂಗಳೂರು: ಪೇ ಸಿಎಂ ಅಭಿಯಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚುವ ಪೋಸ್ಟರ್ ಹೊರತು, ಇದಕ್ಕೆ ಇನ್ನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೇ ಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷ ಯಾವುದೇ ಸಮುದಾಯವನ್ನು ಗುರಿಯಾಗಿಸುವ ಪ್ರಯತ್ನ ಮಾಡುತ್ತಿಲ್ಲ. ಬಿಜೆಪಿಯವರು ಸಿಎಂ ವಿರುದ್ಧದ ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂದು ಬ್ರ್ಯಾಂಡ್ ಮಾಡುತ್ತಿರುವುದು ಹತಾಶ ಮನಸ್ಥಿತಿಯ ಪ್ರತೀಕ.
ಭ್ರಷ್ಟಾಚಾರಿಗಳಿಗೆ ಯಾವುದೇ ಜಾತಿ, ಸಮೂದಾಯ ಇರುವುದಿಲ್ಲ. ಭ್ರಷ್ಟರದ್ದೇ ಒಂದು ಜಾತಿ. ಅದರ ಹೆಸರೇ ಬಿಜೆಪಿ ಎಂದು ಟೀಕಿಸಿದ್ದಾರೆ. ಪೇ ಸಿಎಂ ಅಭಿಯಾನ ಹೇಗೆ ಲಿಂಗಾಯತ ವಿರೋಧಿ ಆಗುತ್ತದೆ? ಬಿಜೆಪಿಯ ಲಾಜಿಕ್ ಏನು? ಬೊಮ್ಮಾಯಿ ವಿರುದ್ಧದ ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ ಬಿಜೆಪಿ, ಸತ್ಯವನ್ನು ಡೈವರ್ಟ್ ಮಾಡುತ್ತಿದೆ ಎಂದು ದೂರಿದ್ದಾರೆ.
ಆದರೆ ಬಿಜೆಪಿಯವರಷ್ಟು ಲಿಂಗಾಯತ ವಿರೋಧಿಗಳು ಯಾರಿದ್ದಾರೆ? ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪರನ್ನು ಸಿಎಂ ಪದವಿಯಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದು, ಲಿಂಗಾಯತ ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೇ? ಬೊಮ್ಮಾಯಿ ಸರ್ಕಾರದ ಮೇಲಿರೋ ಭ್ರಷ್ಟಾಚಾರದ ಕಳಂಕದಿಂದ ಲಿಂಗಾಯತ ಮತಗಳು ಕೈತಪ್ಪಿ ಹೋಗುವ ಆತಂಕ ಬಿಜೆಪಿಯವರನ್ನು ಕಾಡುತ್ತಿದೆ ಎಂದರು.