ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈಗ ಪೇ ಮೇಯರ್ ಪೋಸ್ಟರ್ ಅಭಿಯಾನ ಜೋರಾಗಿದೆ. ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು ವೆಚ್ಚ ಮಾಡಿದ್ದಕ್ಕೆ ಪೇ ಮೇಯರ್ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ನಾಯಕ ರಜತ್ ಉಳ್ಳಾಗಡ್ಡಿಮಠ ಅವರು, ಮೇಯರ್ ವಿರುದ್ದ ವಾಗ್ದಾಳಿ ನಡೆಸಿದರು.
ಮೇಯರ್ ಈರೇಶ್ ಅಂಚಟಗೇರಿ ವಿರುದ್ದ ಪೇ ಮೇಯರ್ ಅಭಿಯಾನ ಸದ್ದು ಮಾಡ್ತಿದೆ. ನಗರ ರಸ್ತೆ ದುರಸ್ತಿಗೆ ಹಣವಿಲ್ಲ ಎನ್ನುವ ಮೇಯರ್ ಈರೇಶ ಅಂಚಟಗೇರಿ ಪೌರ ಸನ್ಮಾನ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ಪೆಂಡಾಲ್ ಹಾಕಿದ ನಂತರ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ಮೇಯರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿ – ಧಾರವಾಡ ಪೇ ಮೇಯರ್ ಅಭಿಯಾನದ ಹಿನ್ನೆಲೆ ಮೇಯರ್ ಈರೇಶ ಅಂಚಟಗೇರಿ ಪ್ರತಿಕ್ರಿಯೆ ನೀಡಿದ್ದು, ಅವರು ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೂರೆ ಅವರ ವಾಟ್ಸ್ಆ್ಯಪ್ನಿಂದ ಅದು ಬಂತು. ಪೇಸ್ ಬುಕ್ನಲ್ಲಿ ಕೂಡ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಹಾಗೂ ಮಂಜುನಾಥ ನಡಟ್ಟಿ ಎನ್ನುವವರು ಹಾಕಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯಕ್ಕೆ ಪೊಲೀಸ್ ಆಯುಕ್ತರಿಗೆ ಅದನ್ನು ನಾನು ಕಳುಹಿಸಿದ್ದೇನೆ. ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದ್ದೇನೆ. ನನ್ನ ಮೇಲೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ದುಂದುವೆಚ್ಚ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅದನ್ನು ರಾಷ್ಟ್ರಪತಿ ಕಾರ್ಯಾಲಯದಿಂದ ತನಿಖೆ ಮಾಡಬೇಕು ಎಂದು ಆಗ್ರಹ ಮಾಡುತ್ತೇನೆ ಎಂದು ಹು – ಧಾ ಪಾಲಿಕೆ ಮೇಯರ್ ಈರೇಶ ಅಂಚಟಗೇರಿಯವರು ತಿಳಿಸಿದರು.