ಮಂಡ್ಯ: ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಅಕ್ಷರಶಃ ಯುದ್ಧವನ್ನೇ ಸಾರಿದ್ದಾರೆ. ಕಾಂಗ್ರೆಸ್ ಆರಂಭಿಸಿರುವ ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದೀಗ ಈ ಅಭಿಯಾನ ಜಿಲ್ಲೆಗಳನ್ನೂ ಮುಟ್ಟಿದೆ. ಮಂಡ್ಯದಲ್ಲಿ ಹೊಸದಾಗಿ ಪೇ ಎಂಎಲ್‌ಎ ಪೋಸ್ಟರ್ ಅಭಿಯಾನ ಆರಂಭವಾಗಿದೆ.
ಮಂಡ್ಯದ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಸುರೇಶ್‌ಗೌಡ ವಿರುದ್ಧ ಪೇ ಎಂಎಲ್‌ಎ ಪೋಸ್ಟರ್ ಆರಂಭಿಸಲಾಗಿದೆ. ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪೋಸ್ಟರ್ ಮಾಡಿರುವ ರೀತಿಯಲ್ಲೇ ಕ್ಯೂಆರ್ ಕೋಡ್ ಮಧ್ಯೆ ಸುರೇಶ್ ಗೌಡರ ಪೋಟೊ ಬಳಸಿ ಪೋಸ್ಟರ್ ಮಾಡಲಾಗಿದ್ದು. 40% ಕಮಿಷನ್ ಎಂಎಲ್‌ಎ ಎಂದು ಬರೆಯಲಾಗಿದೆ. ಅಲ್ಲದೇ ಹ್ಯಾಶ್ ಟ್ಯಾಗ್ ಬಳಸಿ 40% MLA, ‘40% Accepted here’ ಎಂದು ಬರೆಯಲಾಗಿದೆ. ಸದ್ಯ ಈ ಪೋಸ್ಟರ್ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಷೇತ್ರದಲ್ಲಿ ಸುರೇಶ್‌ಗೌಡರ ಸಾಧನೆ ಶೂನ್ಯ, ರೈತರ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಈ ಪೋಸ್ಟರ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಇನ್ನೊಂದು ಕಡೆ ಮಂಡ್ಯದಲ್ಲೇ ರೈತರಿಂದ #FormerPay ಎಂಬ ಇನ್ನೊಂದು ಅಭಿಯಾನವೂ ಆರಂಭವಾಗಿದ್ದು, ಎರೆಡೂ ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ನೀಡಲಾಗಿದೆ. ಅತೀವೃಷ್ಟಿಯಿಂದ ರೈತರು ಬೀದಿಗೆ ಬಂದಿದ್ದಾರೆ. ಆದ್ರೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ತಮ್ಮ ಕಿತ್ತಾಟದಲ್ಲಿ ರೈತರನ್ನ ಮರೆತಿವೆ ಎಂದು ಆಕ್ರೋಶ ಹೊರಹಾಕಲಾಗುತ್ತಿದೆ. ಒಟ್ಟಾರೆ ರಾಜ್ಯ ಕಾಂಗ್ರೆಸ್ ನಾಯಕರು ಆರಂಭಿಸಿರುವ ಪೇಸಿಎಂ ಅಭಿಯಾನ ಜಿಲ್ಲೆಗಳಿಗೂ ತಲುಪಿದೆ.



