ಶಿವಮೊಗ್ಗ : ಪಕ್ಷ ಅವಕಾಶ ಕೊಟ್ಟರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಆಶಯ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅವಕಾಶಕ್ಕಾಗಿ ಎಲ್ಲರೂ ಕಾಯ್ತಾ ಇರ್ತಾರೆ, ನಂಗೆ ಅವಕಾಶ ಸಿಕ್ಕರೆ ಖಂಡಿತಾ ಸ್ಪರ್ಧಿಸ್ತೇನೆ ಎಂದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಇನ್ನೂ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಕೊಟ್ಟಂತಹ ಭರವಸೆಗಳನ್ನು ಈಡೇರಿಸೋದಿಲ್ಲ ಎಂದು ವಿರೋಧ ಪಕ್ಷಗಳು ವಿರೋಧಿಸಿದ್ದರು, ಆದ್ರೆ ಕೈ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದ್ದು, ಈಗಾಗಲೇ ಗೃಹಜ್ಯೋತಿ, ಶಕ್ತಿ ಯೋಜನೆಯ ಲಾಭ ಜನ ಪಡೆಯುತ್ತಿದ್ದಾರೆ ಎಂದು ಸಂತಸಪಟ್ಟರು.
ಬಿಪಿಎಲ್ ಕಾರ್ಡ್ ಗೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಅಂತ ಭರವಸೆ ನೀಡಿದ್ದೇವು, ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ರೂ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲಿಲ್ಲ, ಈಗಾಗಲೇ ನಮ್ಮ ಸರ್ಕಾರ 3 ಗ್ಯಾರಂಟಿ ಜಾರಿ ಮಾಡಿದೆ ಜನ ಇದರ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ; ಕುತೂಹಲ ಕೆರಳಿಸಿದ ಕೆಜಿಎಫ್ ಬಾಬು-ಡಿಕೆಶಿ ಭೇಟಿ!
ನಮ್ಮ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ, ಮೈಸೂರಿನಲ್ಲಿ ಆ. 30 ರಂದು ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಒಂದು ಬಟನ್ ಒತ್ತಿದ ಕೊಡಲೇ ಫಲಾನುಭವಿಗಳಿಗೆ ಅವರ ಅಕೌಂಟ್ ಗೆ ಹಣ ಸಂದಾಯ ಆಗಲಿದೆ. 5ನೇ ಗ್ಯಾರಂಟಿ ದಿನಾಂಕವನ್ನ ರಾಹುಲ್ ಗಾಂಧಿ ಘೋಷಣೆ ಮಾಡಲಿದ್ದಾರೆ ಎಂದು ವಿವರಿಸಿದರು.
ಚುನಾವಣೆ ಪ್ರಣಾಳಿಕೆಗಳಲ್ಲಿ ನೀಡಿದ ಭರವಸೆ ಈಡೇರಿಸುವ ಕೆಲಸ ಮಾಡಲಾಗುತ್ತಿದೆ, ರಾಜ್ಯದ ಮಕ್ಕಳಿಗೆ ಮೊಟ್ಟೆ, ಚಿಕ್ಕಿ ಕೊಡುವ ಯೋಜನೆಗೆ ಈಗಾಗಲೇ ಮಧು ಬಂಗಾರಪ್ಪ ಚಾಲನೆ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್ ಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಆರೋಗ್ಯಕ್ಕೆ, ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ, ಮನೆ ಬಾಗಿಲಿಗೆ ವೈದ್ಯರು ಹೋಗುವ ಯೋಜನೆಗೆ ಚಾಲನೆ ನೀಡಲಿದ್ದಾರೆ, ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ , ಆದರೆ ಪ್ರಧಾನಿ ನರೇಂದ್ರ ಮೋದಿ ಬೋಗಸ್ ಭರವಸೆಗಳನ್ನು ನೀಡಿ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇಸ್ರೋ ನಿರ್ಮಾಣ ಆಗಿದ್ದು ನೆಹರು ಕಾಲದಲ್ಲಿ , ಈಗ ನರೇಂದ್ರ ಮೋದಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ, ರಾಹುಲ್ ಗಾಂಧಿಯವರು ನಡೆದುಕೊಳ್ಳುತ್ತಿರುವ ರೀತಿಗೂ ಪ್ರಧಾನಿಗಳು ನಡೆದುಕೊಳ್ಳುವ ರೀತಿಗೂ ಸಾಕಷ್ಟು ವ್ಯತ್ಯಾಸ ಇದೆ, ಪ್ರಧಾನಿಗಳು ಖಾತೆಯಲ್ಲಿ ಹಣ ಇಟ್ಟುಕೊಳ್ಳದೆ ಅದಾನಿ,ಅಂಬಾನಿಗಳ ಖಾತೆಯಲ್ಲಿ ಹಣ ಇಡುತ್ತಿದ್ದಾರೆ. ಲೋಕ ಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುತ್ತಿದ್ದೇವೆ ಎಂದು ವಿವರಿಸಿದರು.
ಈಗಾಗಲೇ ಆಯನೂರು ಮಂಜುನಾಥ್, ನಾಗರಾಜಗೌಡ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ, ಜಿಲ್ಲೆಯಲ್ಲಿ ಲೋಕಸಭಾ ಸ್ಥಾನ ಗೆಲ್ಲುವ ಎಲ್ಲಾ ಅವಕಾಶಗಳು ನಮಗಿದೆ, ನಾವು ಇಲ್ಲಿಯವರೆಗೂ ಯಾವುದೇ ಭರವಸೆ ನೀಡದೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ, ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.