ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಎಂದು ಮತದಾರರಿಗೆ ಮೋಸ ಮಾಡಿದ್ದಾರೆ. ಜನರಿಗೆ ‘ಕಾಮ್ ಕಿ ಬಾತ್’ ಬೇಕು ‘ಮನ್ ಕಿ ಬಾತ್’ ಅಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ವಾಗ್ದಾಳಿ ನಡೆಸಿದರು.
ಸರ್ಕಾರ 100 ದಿನ ಪೂರೈಸಿದ ಹಿನ್ನಲೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಕಳೆದ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 44%ರಷ್ಟು ವೋಟ್ ಕೊಟ್ಟು ಜನರು ನಮ್ಮ ಪರ ತೀರ್ಪು ಕೊಟ್ಟಿದ್ದಾರೆ. ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಈಗಾಗಲೇ 3 ಗ್ಯಾರಂಟಿ ಕೊಟ್ಟಿದ್ದೇವೆ; 4ನೇ ಗ್ಯಾರಂಟಿ 30ನೇ ತಾರೀಕಿನಂದು ಜಾರಿ ಮಾಡುತ್ತೇವೆ. ಈಗಾಗಲೇ 48 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡ್ಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆಗೆ ಕಮಿಟಿ ರಚಿಸಿದ್ದೇವೆ. ಕೊರೊನ ಅವ್ಯವಹಾರ ಮಾಡಿದವರ ವಿರುದ್ಧ ಕೂಡ ತನಿಖೆ ಮಾಡ್ತೇವೆ. ಅಧಿಕೃತ ವಿರೋಧ ಪಕ್ಷ ನಾಯಕನಿಲ್ಲದೆ ಸದನ ನಡೀತು. ನನ್ನ 40 ವರ್ಷದ ರಾಜಕೀಯದಲ್ಲಿ ಈ ಪರಿಸ್ಥಿತಿ ನೋಡಿರಲಿಲ್ಲ. ಕಾಂಗ್ರೆಸ್ ಪಕ್ಷ ಆಪರೇಶನ್ ಹಸ್ತ ಮಾಡಲ್ಲ, ಜನ ನಮಗೆ 136 ಸೀಟು ಕೊಟ್ಟಿದ್ದಾರೆ. ಅವರಿಗೆ ಬಿಜೆಪಿ, ಜನತಾದಳ ಬೇಡವಾಗಿದೆ ಎಂಬ ಕಾರಣಕ್ಕೆ ನಮ್ಮ ಪಕ್ಷದ ಸಿದ್ದಾಂತ ಒಪ್ಕೊಂಡು ಬಂದ್ರೆ ಸ್ವಾಗತ’ ಎಂದು ಹೇಳಿದರು.
ಇದನ್ನೂ ಓದಿ; ಮೋದಿ ಸ್ವಾಗತಿಸಲು ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು; ಪ್ರಧಾನಿ ಕಚೇರಿಗೆ ಬಿಬಿಎಂಪಿ ಫೈನ್?
‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನೆ ಮಾಡುವ ಹಕ್ಕಿದೆ; ಅದಕ್ಕೂ ಮೊದಲು ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡಲಿ. ಯಾವ ಘನಕಾರ್ಯಕ್ಕೆ ಜನ ಬಿಜೆಪಿಗೆ ವೋಟ್ ಹಾಕಬೇಕು? ಸುಳ್ಳು ಹೇಳಿದಕ್ಕ..? ನರೇಂದ್ರ ಮೋದಿ ಮನ್ ಕಿ ಬಾತ್ ಹೆಸರಿನಲ್ಲಿ ಜನಕ್ಕೆ ಮೋಸ ಮಾಡಿದ್ದಾರೆ. ಜನಕ್ಕೆ ಕಾಮ್ ಕೀ ಬಾತ್ ಬೇಕು ಮನ್ ಕೀ ಬಾತ್ ಅಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನ ಗೆಲ್ಲುವುದು ಖಚಿತ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಮ್ಮ ಪಕ್ಷ ಸಮರ್ಪಕ ನಿಲುವು ತಳೆದಿದೆ’ ಎಂದರು.
ಬಿಜೆಪಿ ಪಕ್ಷದ ಚಾರ್ಜ್ ಶೀಟ್ ಬಿಡುಗಡೆಗೆ ಪ್ರತಿಕ್ರಿಯಿಸಿ, ‘ವಿರೋಧಿಸುವುದು ಪ್ರತಿಪಕ್ಷದ ಕರ್ತವ್ಯ. ಅದಕ್ಕೂ ಮೊದಲು ಅವರು ಪ್ರತಿಪಕ್ಷದ ನಾಯಕನನ್ನೇ ಆಯ್ಕೆ ಮಾಡಿಲ್ಲ. ಮೊದಲು ಪ್ರತಿಪಕ್ಷದ ನಾಯಕನನ್ನು ನೇಮಕ ಮಾಡಲಿ; ಆಮೇಲೆ ಚಾರ್ಜ್ ಶೀಟ್ ಬಿಡುಗಡೆ ಮಾಡಲಿ. ಸಳ್ಳು ಹೇಳೋದಕ್ಕೆ ಯಾರಿಗಾದ್ರೂ ಆಸ್ಕರ್ ಕೊಡೋದಾದ್ರೆ ನರೇಂದ್ರ ಮೋದಿಗೆ ನೀಡಬೇಕು. 9 ವರ್ಷದಿಂದ ಸುಳ್ಳು ಹೇಳ್ತಾ ಅಧಿಕಾರ ಮಾಡ್ತಿರೋ ಬಿಜೆಪಿಯನ್ನು ನಗ್ನ ಮಾಡ್ತೀವಿ’ ಎಂದು ಸಲೀಂ ಅಹಮದ್ ಸವಾಲು ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.