Monday, December 4, 2023
spot_img
- Advertisement -spot_img

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕೊನೆಗೂ ಅನುಮತಿ

ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಮೂರು ದಿನ ಗಣಪತಿ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅನುಮತಿ ನೀಡಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಎರಡು ದಿನದಿಂದ ಅನುಮತಿಗೆ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲದೇ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತಿದ್ದರು. ಹೀಗಾಗಿ ಪಾಲಿಕೆ ಆಯುಕ್ತರು ಮೂರು ದಿನ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ದಾರೆ.

ಈದ್ಗಾ ಮೈದಾನದಲ್ಲಿ ಸೆಪ್ಟೆಂಬರ್ 19 ರಂದು ಗಣೇಶ ಪ್ರತಿಷ್ಠಾಪನೆಗೆ ತೀರ್ಮಾನ ಮಾಡಲಾಗಿದ್ದು, ಮೂರು ದಿನಗಳ ಕಾಲ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿದೆ. ರಾಣಿ ಚೆನ್ನಮ್ಮ ಗಣೇಶ ಮಹಾಮಂಡಳಕ್ಕೆ ಅನುಮತಿ ನೀಡಲಾಗಿದ್ದು, ಕಳೆದ ವರ್ಷದ ನಿಬಂಧನೆಗಳನ್ನು ವಿಧಿಸಲಾಗಿದೆ. ಇನ್ನೂ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಲವು ಷರತ್ತುಗಳನ್ನು ಹಾಕಿ ಅನುಮತಿ ನೀಡಲಾಗಿದ್ದು, ಕಡ್ಡಾಯವಾಗಿ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯಲು ಸೂಚಿಸಲಾಗಿದೆ.

ಇದನ್ನೂ ಓದಿ: ಈದ್ಗಾ ವಿವಾದ; ಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ

19 ರಂದು ಬೆಳಿಗ್ಗೆ 6 ಗಂಟೆಯಿಂದ 21 ರಂದು ಮಧ್ಯಾಹ್ನ 12 ಗಂಟೆಯವರೆಗೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದ್ದು, 30*30 ಅಳತೆಯ ಪೆಂಡಾಲ ಹಾಕಲು ಅವಕಾಶ ಮಾಡಲಾಗಿದ್ದು, ಮನರಂಜನಾ ಕಾರ್ಯಕ್ರಮ ನಿಷೇಧ ಮಾಡಲಾಗಿದ್ದು, ಗಣೇಶ ಉತ್ಸವದ ಹೊರತಾಗಿ ಯಾವುದೇ ಬಾವುಟ, ಭಿತ್ತಪತ್ರ, ವಿವಾದಿತ ಪೋಟೋ ಪ್ರದರ್ಶನ ನಿಷೇಧಿಸಲಾಗಿದೆ.

ಅನಾವಶ್ಯಕ ಗಲಭೆ, ಗಲಾಟೆಗಳಿಗೆ ಆಯೋಜಕರೇ ಹೊಣೆ ಎಂದು ಸೂಚಿಸಲಾಗಿದ್ದು, ಅನ್ಯ ಧರ್ಮೀ ಯರ ಭಾವನೆಗಳಿಗೆ ಧಕ್ಕೆ ತರುವಂತಿಲ್ಲ, ಪ್ರಚೋದನಕಾರಿ ಹೇಳಿಕೆ, ಭಾಷಣ ನಿಷೇಧ ಸೇರಿ 18 ಷರತ್ತುಗಳನ್ನು ಪಾಲಿಕೆ ವಿಧಿಸಿದೆ.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ಬೆನ್ನಲ್ಲೇ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಹಿಂಬಾಗಿಲಿನಿಂದ, ಅಂಜುಮನ್ ಸಂಸ್ಥೆ ಮೂಲಕ ಕೋರ್ಟ್ ರಿಟ್‌ ಅರ್ಜಿ ಸಲ್ಲಿಸಿದೆ ಎಂದು ತಿಳಿಸಿದರು.

ಕೊನೆ ಕ್ಷಣದಲ್ಲಿಯಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ, ಮುಂದೆ ಕೂಡ ಹಿಂದೂ ಹಬ್ಬಗಳ ಆಚರಣೆಗೆ ಅಡೆ ತಡೆ ಮಾಡಬಾರದು, ನ್ಯಾಯಾಲಯ ಅತ್ಯುತ್ತಮ ತೀರ್ಪು ಕೊಟ್ಟಿದೆ, ನಮಗೆ ದೊಡ್ಡ ಜಯ ಸಿಕ್ಕಿದೆ. ಈದ್ಗಾ ಮೈದಾನದಲ್ಲಿ ವಿಜ್ರಂಭಣೆಯಿಂದ ಹಬ್ಬ ಆಚರಣೆ ಮಾಡುತ್ತೇವೆ ಎಂದರು.

ಹುಬ್ಬಳ್ಳಿ – ಗಣೇಶಕ್ಕೆ ಅನುಮತಿ ಕೊಟ್ಟ ನಂತರ ಶಾಸಕ ಅರವಿಂದ ಬೆಲ್ಲದ್‌ ಮಾಧ್ಯಮದವರೊಂದಿಗೆ ಮಾತನಾಡಿ, ನ್ಯಾಯಾಲಯ ಅನುಮತಿ ಕೊಟ್ಟ ನಂತರವೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ, ಮತ ಬ್ಯಾಂಕ್‌ಗೆ ಕಾಂಗ್ರೆಸ್ ತುಚ್ಛೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಠರಾವು ಮಾಡಲಾಗಿತ್ತು, ಅಂಜುಮನ್ ಸಂಸ್ಥೆ ಮೇಲಿಂದ ಮೇಲೆ ಕೋರ್ಟಿಗೆ ಹೋಗುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯತ್ನ ಮಾಡಿದೆ, ಮೇಲಿಂದ ಮೇಲೆ ಕೋರ್ಟ್ ಗೆ ಹೋಗಿ ಸಮಾಜದಲ್ಲಿರುವ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ, ಕೊನೆಗೂ ನ್ಯಾಯಾಲಯದಿಂದಾಗಿ ನಮಗೆ ಅನುಮತಿ ಸಿಕ್ಕಿದೆ, ಇದು ಗಣಪತಿ ಭಕ್ತರ ಗೆಲುವು ಎಂದು ಸಂತಸಪಟ್ಟರು.

ಸಿದ್ದರಾಮಯ್ಯ ಸರ್ಕಾರ ಎಲ್ಲರ ಮತಗಳನ್ನು ತೆಗೆದುಕೊಂಡು ಅಧಿಕಾರಕ್ಕೆ ಬಂದಿದೆ, ಈಗಲಾದರೂ ಸರ್ಕಾರ ಯಾವುದೇ ರೀತಿ ಆಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles