ವಿಜಯನಗರ : ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ಟೀಂ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಮತ್ತಷ್ಟು ಹಿನ್ನೆಲೆ ಬಯಲಾಗುತ್ತಿದ್ದು, ವಂಚನೆಗೊಳಗಾದ ಗೋವಿಂದ ಬಾಬು ಮತ್ತು ಚೈತ್ರಾ ಹಿರೇಹಡಗಲಿಯ ಹಾಲಮಠಕ್ಕೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿದೆ.
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಮಠದ ಅಭಿನವ ಹಾಲಶ್ರೀ, ವಂಚನೆ ಪ್ರಕರಣದ ಮೂರನೇ ಆರೋಪಿಯಾಗಿದ್ದಾರೆ. ಚೈತ್ರಾ ಮತ್ತು ಗೋವಿಂದ ಬಾಬು ನಡುವೆ ಹಾಲಶ್ರೀ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಹಾಲಮಠದಲ್ಲೇ ಏಳು ಕೋಟಿ ರೂಪಾಯಿ ಡೀಲ್ ನಡೆದಿತ್ತು ಎಂದು ಆರೋಪಿಸಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಚೈತ್ರಾ ಮತ್ತು ಗೋವಿಂದ ಬಾಬು ಒಟ್ಟಿಗೆ ಹಾಲಮಠಕ್ಕೆ ಭೇಟಿ ನೀಡಿರುವ ಫೋಟೋಗಳು ಲಭ್ಯವಾಗಿವೆ.


ವಿಧಾನಸಭಾ ಚುನಾವಣೆಗೆ ಮುನ್ನ ಗೋವಿಂದ ಬಾಬು ಅವರನ್ನು ಕರೆದುಕೊಂಡು ಹಾಲಮಠಕ್ಕೆ ತೆರಳಿದ್ದ ಚೈತ್ರಾ, ಹಾಲಶ್ರೀ ಸಮ್ಮುಖದಲ್ಲಿ ಡೀಲ್ ಕುದುರಿಸಿದ್ದರು. ಇದಕ್ಕಾಗಿ ಹಾಲಶ್ರೀ ಗೋವಿಂದ ಬಾಬು ಅವರಿಂದ 1.50 ಕೋಟಿ ರೂಪಾಯಿ ಹಣ ಪಡೆದಿದ್ದರು ಎಂದು ತಿಳಿದು ಬಂದಿದೆ.


ಚೈತ್ರಾ ಕುಂದಾಪುರ ಉಡುಪಿಯಲ್ಲಿ ಬಂಧನವಾಗುತ್ತಿದ್ದಂತೆ ಹಾಲಶ್ರೀ ಮಠದಿಂದ ಕಾಣೆಯಾಗಿದ್ದರು. ಬುಧವಾರ ಬೆಳಗಿನಿಂದ ಮೊಬೈಲ್ ಆಫ್ ಮಾಡಿಕೊಂಡಿದ್ದ ಸ್ವಾಮೀಜಿ, ಮಠಕ್ಕೂ ಬಾರದೆ, ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಆದರೆ, ಸಂಜೆಯ ವೇಳೆಗೆ ಹಾಲಶ್ರೀ ಅವರನ್ನು ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.