ಬೆಂಗಳೂರು: ಕರ್ನಾಟಕ ಹೂಡಿಕೆ ಮಾಡಲು ಒಳ್ಳೆಯ ತಾಣ. ಅದರಲ್ಲೂ ಭವಿಷ್ಯದ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಅವಕಾಶ ಇದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಇನ್ವೆಸ್ಟ್ ಕರ್ನಾಟಕ ಸಮ್ಮೇಳನದಲ್ಲಿ ಮಾತನಾಡಿ, ಕರ್ನಾಟಕದವರ ಹೂಡಿಕೆ ಆಲೋಚನೆಗಳು ಯಾವ ರೀತಿ ಇದೆ ಎಂದರೆ, ಕರ್ನಾಟಕದ ಸಂಸ್ಕೃತಿಯನ್ನು ಹೇಳುವ ‘ಕಾಂತಾರ’ ಸಿನಿಮಾದ ರೀತಿಯೇ ಎಂದರು. ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾದ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಡಿಮೆ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ 20 ಪಟ್ಟು ಹೆಚ್ಚು ಗಳಿಕೆ ಮಾಡಿದೆ. ಹೂಡಿಕೆದಾರರು ಈ ನಿಟ್ಟಿನಲ್ಲಿಯೂ ಚಿಂತನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದೇಶ ಹಾಗೂ ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ’ ಎಂದರು.
‘ಕಾಂತಾರ’ ಸಿನಿಮಾ ಕನ್ನಡದಲ್ಲಿ ತೆರೆಗೆ ಬಂದಿದ್ದು ಸೆಪ್ಟೆಂಬರ್ 30ಕ್ಕೆ. ಇದಾದ ಕೆಲವೇ ಕೆಲವು ವಾರಗಳ ಬಳಿಕ ಈ ಚಿತ್ರ ಹಿಂದಿಯಲ್ಲಿ ರಿಲೀಸ್ ಆಯಿತು. ಹಿಂದಿಯಲ್ಲಿ ಆರಂಭದ ದಿನಗಳಲ್ಲಿ ಈ ಚಿತ್ರ ಒಂದೆರಡು ಕೋಟಿ ಮಾತ್ರ ಕಲೆಕ್ಷನ್ ಮಾಡಿತು. ದಿನ ಕಳೆದಂತೆ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಕ್ಕಿತು. ಇದು ಚಿತ್ರಕ್ಕೆ ಪ್ಲಸ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ.