ನವದೆಹಲಿ : ದೇಶಾದ್ಯಂತ ರಾಮ ನವಮಿಯ ಸಂಭ್ರಮವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಸವರಾಜಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸೇರಿದಂತೆ ಗಣ್ಯರು ದೇಶದ ಜನತೆಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ರಾಮನ ಜೀವನವು ಪ್ರತಿ ಯುಗದಲ್ಲೂ ಸ್ಫೂರ್ತಿಯಾಗಲಿದೆ. ನನ್ನ ಎಲ್ಲಾ ದೇಶವಾಸಿಗಳಿಗೆ ಶ್ರೀ ರಾಮ ನವಮಿಯ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.ಈ ಕುರಿತು ಟ್ವಿಟ್ ಮಾಡಿರುವ ಮೋದಿ, “ಎಲ್ಲಾ ದೇಶವಾಸಿಗಳಿಗೆ ಶ್ರೀ ರಾಮ ನವಮಿಯ ಶುಭಾಶಯಗಳು. ತ್ಯಾಗ, ತಪಸ್ಸು, ಸಂಯಮ ಮತ್ತು ಸಂಕಲ್ಪವನ್ನು ಆಧರಿಸಿದ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರನ ಜೀವನವು ಪ್ರತಿ ಯುಗದಲ್ಲೂ ಮಾನವೀಯತೆಗೆ ಸ್ಫೂರ್ತಿಯಾಗಲಿದೆ” ಎಂದಿದ್ದಾರೆ.
“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ. ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ. ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ” ಎಂಬ ಹಾಡಿನ ಸಾಲುಗಳನ್ನು ಬರೆಯುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಸ್ತ ಜನತೆಗೆ ಶ್ರೀ ಮರ್ಯಾದಾ ಪುರುಷೋತ್ತಮ, ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. ಜೊತೆಗೆ, ಪ್ರಭು ರಾಮಚಂದ್ರ ಸರ್ವರ ಬಾಳಿನಲ್ಲಿ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ ದೇಶದ ಸಮಸ್ತ ಜನತೆಗೆ ರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. “ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ನಾನು ಭಾವಿಸುತ್ತೇನೆ” ಅಂತಾ ತಿಳಿಸಿದ್ದಾರೆ.