ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ಶೇ. 100 ಸುಸ್ಥಿರತೆಯೊಂದಿಗೆ ರಚಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಈ ಟರ್ಮಿನಲ್ 2 ಉದ್ಯಾನನಗರಿಯ ಕೀರ್ತಿಗೆ ಮತ್ತೊಂದು ಸೇರ್ಪಡೆಯಾಗಿದೆ.ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಟರ್ಮಿನಲ್ 2, ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ.
ಈ ಟರ್ಮಿನಲ್ 2 ವನ್ನು ಗಾರ್ಡನ್ ಟರ್ಮಿನಲ್ ಎಂದು ಕರೆಯಲಾಗುತ್ತದೆ. ಪರಿಸರ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿಯಾಗಿದೆ. ಅಷ್ಟೇ ಅಲ್ಲದೆ, ಟರ್ಮಿನಲ್ 2 ಕರ್ನಾಟಕ ಪರಂಪರೆಯನ್ನು ಹಾಗೂ ಸಂಸ್ಕೃತಿಯ ಥೀಮ್ ಒಳಗೊಂಡಿದೆ. 13,000 ಕೋಟಿ ವೆಚ್ಚದಲ್ಲಿ ಟರ್ಮಿನಲ್ 2 ಸ್ಥಾಪನೆ ಮಾಡಲಾಗಿದೆ.
ಉದ್ಘಾಟನೆ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಶಾಸಕರ ಭವನದಲ್ಲಿ ಕನಕದಾಸ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪಾರ್ಚನೆ ಮಾಡಿದರು.