ಬೆಂಗಳೂರು : ಭಾನುವಾರ (ಆಗಸ್ಟ್ 27) ರಂದು ಮನ್ ಕಿ ಬಾತ್ ನ 104ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮೂಲದ ನಿವೃತ್ತ ಬಿಎಂಟಿಸಿ ನೌಕರ ಧನಪಾಲ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.
ಬಿಎಂಟಿಸಿಯಲ್ಲಿ ಬಸ್ ಚಾಲಕರಾಗಿ ನಿವೃತ್ತರಾದ ಬಳಿಕ ಪ್ರವಾಸಿ ತಾಣಗಳ ಮಾರ್ಗದರ್ಶಿಯಾಗಿ ಬೆಂಗಳೂರಿನ ಪರಂಪರೆಯನ್ನು ಅನ್ವೇಷಣೆ ಮಾಡುತ್ತಿರುವ ಧನಪಾಲ್ರ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಕುರಿತು ಇಂದು ಪೊಲಿಟಿಕಲ್ 360 ಜೊತೆ ಮಾತನಾಡಿದ ಧನಪಾಲ್ ಅವರು, ಪ್ರಧಾನಿ ಮೋದಿ ನನ್ನನ್ನು, ನನ್ನ ಕೆಲಸವನ್ನು ಗುರುತಿಸಿದ್ದು ಬಹಳ ಸಂತಸವಾಗಿದೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಬಿಎಂಟಿಸಿ ದರ್ಶಿನಿ ಚಾಲಕನಾಗಿದ್ದಾಗ ಪ್ರಯಾಣಿಕರು ಮಾಹಿತಿ ಕೇಳುತ್ತಿದ್ದರು. ಆಗ ಬೆಂಗಳೂರಿನ ಇತಿಹಾಸದ ಬಗ್ಗೆ ಅಷ್ಟೊಂದು ಮಾಹಿತಿ ಗೊತ್ತಿರಲಿಲ್ಲ. ನಿವೃತ್ತಿಯಾದ ಬಳಿಕ ಬೆಂಗಳೂರಿನ ಮಾಹಿತಿ ನೀಡಬೇಕು ಅಂತ ಎಫಿಗ್ರಾಫಿ ಡಿಪ್ಲೋಮಾ ಮಾಡಿದೆ. ಆ ಬಳಿಕ ನಿರಂತರವಾಗಿ ಸಂಶೋಧನೆ ಮಾಡಲು ಶುರುಮಾಡಿದೆ. ಅದನ್ನು ಈಗ ದೇಶದ ಪ್ರಧಾನಿ ಗುರುತಿಸಿರುವುದು ಬಹಳ ಹೆಮ್ಮೆ ಅನ್ನಿಸ್ತಿದೆ. ಮೋದಿಗೆ ನನ್ನ ಪ್ರಣಾಮಗಳು. ನಿವೃತ್ತನಾಗಿದ್ದರೂ, ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ‘ಕುಮಾರಸ್ವಾಮಿ ದಾಖಲೆ ಇಲ್ಲದೆ ಮಾತಾಡಲ್ಲ; ಲಘುವಾಗಿ ಮಾತಾಡೋದು ಬೇಡ’
ಬಿಬಿಎಂಟಿಸಿ ನೌಕರನಾಗಿದ್ದಾಗಲೇ ಧನಪಾಲ್ ಅವರು ಒಂದು ಪಾಳಿಯಲ್ಲಿ ಕೆಲಸ, ಮತ್ತೊಂದು ಪಾಳಿಯಲ್ಲಿ ಅನ್ವೇಷಣೆ ಶುರು ಮಾಡಿದ್ದರು. ಬೆಂಗಳೂರಿನ ಹಲವು ಶಿಲಾ ಶಾಸನಗಳನ್ನು ಪತ್ತೆ ಹಚ್ಚಿ ಅವುಗಳ ಮಾಹಿತಿ ಹೊರತೆಗೆದಿದ್ದರು. ಪ್ರಸ್ತುತ ನಿವೃತ್ತರಾಗಿರುವ ಧನಪಾಲ್, ಈಗಲೂ ಬೆಂಗಳೂರಿನ ಅನ್ವೇಷಣೆ ಮಾಡುತ್ತಿದ್ದು,100ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ.
ಧನಪಾಲ್ ಕುರಿತಂತೆ ಈ ಹಿಂದೆ ದಿ ನ್ಯೂ ಸಂಡೆ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಈ ವರದಿ ಗಮನಿಸಿರುವ ಪ್ರಧಾನಿ ಮೋದಿಯವರು, ನಿನ್ನೆಯ ಮನ್ ಕಿ ಬಾತ್ ನಲ್ಲಿ ಧನಪಾಲ್ ಅವರನ್ನು ಪ್ರಶಂಸಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.