ಬೆಂಗಳೂರು: ‘ಕಾಂಗ್ರೆಸ್‌ನವರಿಗೆ ವಿಜ್ಞಾನಿಗಳನ್ನು ಕಂಡ್ರೆ ಆಗಲ್ಲ; ಅವರಿಗೆ ಕಾಂಗ್ರೆಸ್ ಪರಿವಾರ ಬಿಟ್ರೆ, ದೇಶ-ರಾಜ್ಯ ಮುಂದುವರಿಯಬೇಕು ಅನ್ನೋದೆಲ್ಲಾ ಇಲ್ಲ. ಕಾಂಗ್ರೆಸ್‌ನವರಿಗೆ ಪ್ರೋಟೋಕಾಲ್ ಎಲ್ಲ ಗೊತ್ತಿಲ್ಲ’ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ಮಾಡಿದ್ದ ಟೀಕೆಗೆ ತಿರುಗೇಟು ಕೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್, ‘ಅಶೋಕ್ ಅವರಿಗೆ ಬುದ್ದಿ ಭ್ರಮಣೆ ಆಗಿರಬೇಕು’ ಎಂದು ಹೇಳಿದ್ದಾರೆ.
ಈ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಪ್ರೊಟೋಕಾಲ್ ನೀಡುವ ವಿಚಾರದಲ್ಲಿ ನನಗೆ ಬಿಜೆಪಿ ಅವರಿಗಿಂತ ಹೆಚ್ಚು ಗೊತ್ತಿದೆ. ಯಾರಿಗೆ ಎಷ್ಟು ಗೌರವ ನೀಡಬೇಕು, ಪ್ರೋಟೋಕಾಲ್ ಹೇಗಿರಬೇಕು ಅಂತ ಬಿಜೆಪಿ ಅವರಿಗಿಂತ ಚೆನ್ನಾಗಿ ಗೊತ್ತಿದೆ; ಅಶೋಕ್ ಅವರಿಗೆ ಬುದ್ದಿ ಭ್ರಮಣೆ ಆಗಿರಬೇಕು. ಇಂಥ ಮಾತುಗಳಿಂದಲೇ ಇವರನ್ನ ಪ್ರಧಾನಿ ದೂರ ಇಟ್ಟಿದ್ದಾರೆ’ ಎಂದು ಡಿಸಿಎಂ ಬಿಜೆಪಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಯಾರಿಗೆ ಎಷ್ಟು ಗೌರವ ನೀಡಬೇಕು, ಪ್ರೋಟೋಕಾಲ್ ಹೇಗಿರಬೇಕು ಅಂತ ಬಿಜೆಪಿ ಅವರಿಗಿಂತ ಚೆನ್ನಾಗಿ ಗೊತ್ತಿದೆ. ನಾವು ಬೆಳಗ್ಗೆಯೇ ಪ್ರಧಾನಿ ಅವರನ್ನ ಪ್ರೋಟೋಕಾಲ್ ಪ್ರಕಾರ ಸ್ವಾಗತಿಸಿದ್ದೇವೆ. ಮೊದಲಬಾರಿಗೆ ಪ್ರಧಾನಮಂತ್ರಿ ರಾಜ್ಯಕ್ಕೆ ಬರ್ತಿದ್ದಾರೆ; ನಮ್ಮ ರಾಜ್ಯದಲ್ಲಿ ಇಸ್ರೋ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜಕೀಯವಾಗಿ ಯಾರೂ ಸ್ವಾಗತ ಕೋರೋದು ಬೇಡ ಅಂತ ಅವರೇ ಹೇಳಿದ್ರು. ಸರ್ಕಾರದ ಪರವಾಗಿ ಪ್ರೋಟೋಕಾಲ್ ನೀಡುವಂತೆ ನಾವು ನಮ್ಮ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದೆವು. ರಾಜಕಾರಣಿಗಳು ಯಾರೂ ಬರೋದು ಬೇಡ ಅಂತ ಪ್ರಧಾನಿ ಕಚೇರಿಯಿಂದ ಹೇಳಿದ್ದಾರೆ’ ಎಂದರು.
ಇದನ್ನೂ ಓದಿ; ಕುತೂಹಲ ಕೆರಳಿಸಿದ ಕೆಜಿಎಫ್ ಬಾಬು-ಡಿಕೆಶಿ ಭೇಟಿ!
‘ಯಾರಿಗೆ ಎಷ್ಟು ಪ್ರೋಟೋಕಾಲ್ ಕೊಡಬೇಕು ಅನ್ನೋದು ಚೆನ್ನಾಗಿ ಅರಿವಿದೆ. ಬೇಕಿದ್ರೆ ಅವರು ಕಳಿಸಿರೋ ದಾಖಲೆ ಕೂಡ ನನ್ನ ಬಳಿ ಇದ್ದು, ಅದನ್ನ ಬಿಡುಗಡೆ ಮಾಡಲು ಸಿದ್ಧನಿದ್ದೇನೆ. ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಗೌರವ ಕೊಡಲು ಬಂದಿದ್ದಾರೆ; ನಾವೂ ಅವರಿಗೆ ಗೌರವ ಕೊಟ್ಟಿದ್ದೇವೆ’ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.
ಅಪರೇಷನ್ ಹಸ್ತದ ಅವಶ್ಯಕತೆ ಇಲ್ಲ:
ಬಿಜೆಪಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಭೇಟಿಯಾಗಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ, ‘ರೇಣುಕಾಚಾರ್ಯ ಅವರಿಗೆ ಕೆಲ ಸಮಸ್ಯೆಗಳಿದ್ವು ಅದಕ್ಕೇ ಭೇಟಿಗೆ ಬಂದಿದ್ದರು. ನಮ್ಮ ನಡುವೆ ಏನೆಲ್ಲಾ ಚರ್ಚೆ ಆಯಿತು ಎಂಬುದನ್ನು ಸಾರ್ವಜನಿಕವಾಗಿ ಹೇಳೋಕೆ ಆಗಲ್ಲ’ ಎಂದರು.
‘ನಾವು ಅಪರೇಷನ್ ಹಸ್ತ ಮಾಡಲ್ಲ; ಮಾಡೋ ಅವಶ್ಯಕತೆಯೂ ಇಲ್ಲ. ನೋಡಿ ಒಬ್ಬರಿಗೂ ಒದೊಂದು ಟೈಮ್ ಇರುತ್ತೆ.. ಯಾರಿಗೆ ಎಷ್ಟು ದಿನ ಕಾಯಲು ಸಾಧ್ಯ? ಅವರು ಜನಗಳಲ್ಲಿ ಬೆಟ್ಟದಷ್ಟು ಆಸೆ ಆಕಾಂಕ್ಷೆಗಳನ್ನ ಇಟ್ಟುಕೊಂಡಿರುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಪಕ್ಷಾತೀತವಾಗಿ ಜನರ ಬಳಿ ಹೋಗಿವೆ. ಅದಕ್ಕೆ ನಮಗೆ ಶುಭ ಹಾರೈಸುತ್ತಾರೆ ತಪ್ಪೇನಿದೆ’ ಎಂದು ಸ್ಪಷ್ಟನೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.