ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದು, ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಲಿದ್ದಾರೆ. ಬೆಳಗ್ಗೆ 6ರಿಂದ ಶಾಸಕರ ಭವನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ವಿಮಾನ ನಿಲ್ದಾಣ ಸುತ್ತಮುತ್ತ 19 ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, 4 ಗೇಟ್ಗಳ ಮೂಲಕ 19 ಕಡೆ ವಾಹನಗಳ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಭುವನಹಳ್ಳಿ ಗೇಟ್ ಬಳಿ ಬೃಹತ್ ಸಮಾವೇಶ ನಡೆಯಲಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಮಾರ್ಗ ಬದಲಾವಣೆ ಮಾಡಿಕೊಂಡಿದ್ದೇವೆ. ಇಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಹಲವೆಡೆ ಸಂಚಾರ ಬಂದ್ ಆಗಿರಲಿವೆ.
ರಾಜಭವನ, ಪ್ಯಾಲೇಸ್ ರೋಡ್, ರೇಸ್ ಕೋರ್ಸ್ ರೋಡ್, ಸ್ಯಾಂಕಿ, ಕ್ವೀನ್ಸ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚಾರ ಬಂದ್ ಆಗಿರಲಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮನವಿ ಮಾಡಿದ್ದಾರೆ.
ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ಕೋರ್ಸ್ ರಸ್ತೆ, ಸ್ಯಾಂಕಿರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ, ಶೇಷಾದ್ರಿ ರಸ್ತೆ-ಮಹಾರಾಣಿ ಕಾಲೇಜು ಬ್ರಿಡ್ಜ್-ರೇಲ್ವೆ ಸ್ಟೇಷನ್ ಪ್ರವೇಶ ದ್ವಾರ, ಕೆ.ಜಿ.ರಸ್ತೆ-ಶಾಂತಲಾ ಜಂಕ್ಷನ್ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ, ವಾಟಾಳ್ ನಾಗರಾಜ್ ರಸ್ತೆ-ಕೋಡೆ ಅಂಡರ್ಪಾಸ್ನಿಂದ ಪಿಎಫ್ವರೆಗೆ, ಏರ್ಪೋರ್ಟ್ ರಸ್ತೆ ಸುತ್ತಲಿನ ಪ್ರದೇಶದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.
ಮಧ್ಯಾಹ್ನ 12.30ರಿಂದ 1.30ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ, ಮಧ್ಯಾಹ್ನ 1.30ಕ್ಕೆ ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಕೆಂಪೇಗೌಡ ಏರ್ಪೋರ್ಟ್ನಿಂದ ತಮಿಳುನಾಡಿನ ಮಧುರೈಗೆ ತೆರಳಲಿದ್ದಾರೆ.
ಇಂದು ರಿಂಗ್ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾರ್ಯಕ್ರಮ ಮುಗಿದ ನಂತರ 2 ಗಂಟೆಗಳ ಕಾಲ ನಿರ್ಬಂಧ ಮುಂದುವರಿಯಲಿದೆ, ಎಲ್ಲಾ ಬಸ್ಗಳಿಗೂ ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ರವಿಕಾಂತೇಗೌಡ ಹೇಳಿದ್ದಾರೆ.