ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ ‘ಇಂಡಿಯಾ ಇಂಟರ್ ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ ಪೋ ಸೆಂಟರ್ ‘ಯಶೋಭೂಮಿ’ (ಐಐಸಿಸಿ) ಯ ಮೊದಲ ಭಾಗವವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಬರೋಬ್ಬರಿ 1.07 ಲಕ್ಷ ಚದರ ಮೀಟರ್ ಗಿಂತಲೂ ದೊಡ್ಡದಾದ ಅತ್ಯಾಧುನಿಕ ಯಶೋಭೂಮಿ ಕನ್ವೆನ್ಷನ್ ಸೆಂಟರ್ ವಸ್ತು ಪ್ರದರ್ಶನ, ವ್ಯಾಪಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸುವ ಉದ್ದೇಶದಿಂದ ನಿರ್ಮಿಸಲಾಗಿದೆ.


ಯಶೋಭೂಮಿಯ ವಿಶೇಷತೆಗಳೇನು?
- ಯಶೋಭೂಮಿ ಕನ್ವೆನ್ಷನ್ ಸೆಂಟರ್ ಏಕಕಾಲಕ್ಕೆ 11,000 ಜನರು ಕುಳಿತುಕೊಳ್ಳುವಷ್ಟು ಆಸನ ಸಾಮರ್ಥ್ಯ ಹೊಂದಿದೆ. ಇದು 15 ಕನ್ವೆನ್ಷನ್ ಕೊಠಡಿಗಳು, ಗ್ರ್ಯಾಂಡ್ ಬಾಲ್ ರೂಂ ಮತ್ತು 13 ಸಭಾ ಕೊಠಡಿಗಳನ್ನುಒಳಗೊಂಡಿದೆ.
- ಅಧಿಕೃತ ವರದಿಗಳ ಪ್ರಕಾರ, ಯಶೋಭೂಮಿಯಲ್ಲಿರುವ ಕನ್ವೆನ್ಷನ್ ಸೆಂಟರ್ ದೇಶದ ಅತಿದೊಡ್ಡ ಎಲ್ಇಡಿ ಪರದೆಯನ್ನು ಹೊಂದಿದೆ.
- ಕನ್ವೆನ್ಷನ್ ಸೆಂಟರ್ ಅನ್ನು ಭಾರತೀಯ ಸಂಸ್ಕೃತಿಯಿಂದ ಪ್ರೇರಿತವಾದ ವಸ್ತುಗಳು ಮತ್ತು ಅಂಶಗಳನ್ನು ಬಳಸಿ ನಿರ್ಮಿಸಲಾಗಿದೆ. ಉದಾಹರಣೆಗೆ ರಂಗೋಲಿ ಮಾದರಿಗಳನ್ನು ಪ್ರತಿನಿಧಿಸುವ ಹಿತ್ತಾಳೆಯ ವಸ್ತುಗಳಿಂದ ನಿರ್ಮಿಸಿದ ಟೆರಾಝೋ ಮಹಡಿಗಳು. ಧ್ವನಿ ಹೀರಿಕೊಳ್ಳುವ ಲೋಹದ ಶೀಟ್ ಗಳು ಮತ್ತು ಪ್ರಕಾಶದಿಂದ ಕೂಡಿದ ಗೋಡೆಗಳು ಯಶೋಭೂಮಿ ಕನ್ವೆನ್ಷನ್ ಸೆಂಟರ್ ನಲ್ಲಿವೆ.
- ಕನ್ವೆನ್ಷನ್ ಸೆಂಟರ್ ಮುಖ್ಯ ಸಭಾಂಗಣವು 6,000 ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ. ಗ್ರ್ಯಾಂಡ್ ಬಾಲ್ ರೂಂ ಹೆಚ್ಚುವರಿ 2,500 ಜನರಿಗೆ ಆಸನ ವ್ಯವಸ್ಥೆ ಹೊಂದಿದೆ. 500 ಜನರು ಕುಳಿತುಕೊಳ್ಳಬಹುದಾದ ವಿಸ್ತೃತ ತೆರೆದ ಪ್ರದೇಶವೂ (ಓಪನ್ ಏರಿಯಾ) ಇದೆ.


ಪ್ರಧಾನಿ ಮೋದಿ ಇಂದು ದ್ವಾರಕಾ ಸೆಕ್ಟರ್ 21ರಿಂದ ದ್ವಾರಕಾ ಸೆಕ್ಟರ್ 25ರವರೆಗಿನ ಏರ್ ಪೋರ್ಟ್ ಮೆಟ್ರೋ ಎಕ್ಸ್ ಪ್ರೆಸ್ ವಿಸ್ತರಣೆ ಕಾಮಗಾರಿಯನ್ನೂ ಉದ್ಘಾಟನೆ ಮಾಡಲಿದ್ದಾರೆ. ದ್ವಾರಕಾ ಸೆಕ್ಟರ್ 25ರ ಯಶೋಭೂಮಿ ಹೊಸ ಭೂಗತ (ಅಂಡರ್ ಗ್ರೌಂಡ್ ) ಮೆಟ್ರೋ ನಿಲ್ದಾಣ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು ದೆಹಲಿ ವಿಮಾನ ನಿಲ್ದಾಣಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.