ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಈಗಾಗಲೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುವ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಪ್ರಧಾನಿ ಮೋದಿ ಆಗಮನ ಹಿನ್ನಲೆ ಜಿಲ್ಲಾಡಳಿತ ಭಾರಿ ಎಚ್ಚರಿಕೆ ವಹಿಸುತ್ತಿದೆ. ಬೆಂಗಳೂರು-ಮೈಸೂರು ಹೈವೇಯನ್ನು ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಮೋದಿ ಮಂಡ್ಯ ಹಾಗೂ ಮದ್ದೂರು ಪ್ರವಾಸ ಕೈಗೊಳ್ಳಲಿದ್ದಾರೆ. ಮದ್ದೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ತೆರಳುವ ವಾಹನಗಳಿಗೆ ಬೆಳಗ್ಗೆ 9.30ರ ವರೆಗೆ ಅವಕಾಶ ನೀಡಲಾಗುತ್ತಿದೆ.
ಸಮಾವೇಶಕ್ಕೆ ಬರುವ ವಾಹನಗಳ ನಿಲುಗಡೆಗೆ ಗೆಜ್ಜಲಗೆರೆ ಕಾಲೋನಿಯಿಂದ 4 ಕೀಲೋ ಮೀಟರ್ ದೂರದಲ್ಲಿ ಅವಕಾಶ ಕಲ್ಪಿಸಲಾಗಿದೆ.ಬೆಳಗ್ಗೆ 7 ಗಂಟೆಯಿಂದಲೇ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಲಿದೆ. ಗೆಜ್ಜಲಗೆರೆ ಸುತ್ತಮುತ್ತ ಗ್ರಾಮಗಳಿಗೆ ತೆರಳುವವರು ಗೆಜ್ಜಲಗೆರೆ ಅಂಡರ್ ಪಾಸ್ನಿಂದ ಕುದುರ ಗುಂಡಿ ಗ್ರಾಮ ಸಾದೋಳಲು ಮಾರ್ಗವಾಗಿ ತೆರಳಬಹುದಾಗಿದೆ. ಇನ್ನೂ ಅಗತ್ಯ ಸೇವೆ ಮತ್ತು ಹಾಲಿನ ವಾಹನಗಳಿಗೆ 9 ಗಂಟೆಯವರೆಗೆ ಮಾತ್ರ ಸರ್ವಿಸ್ ರಸ್ತೆಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.