ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಮತ್ತು ಕುಟುಂಬ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಅಪಘಾತಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಬಂಡೀಪುರದ ಕಡೆಗೆ ತೆರಳುತ್ತಿದ್ದಾಗ ಮೈಸೂರು ತಾಲೂಕಿನ ಕಡಕೋಳದ ಬಳಿ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿತು ಎಂದು ತಿಳಿದು ಬಂದಿದೆ. ಕಾರ್ ನಲ್ಲಿ 70 ವರ್ಷದ ಪ್ರಹ್ಲಾದ್ ಮೋದಿ, ಇವರ ಪುತ್ರ 40 ವರ್ಷದ ಮೇಹುಲ್ ಪ್ರಹ್ಲಾದ್ ಮೋದಿ ಮತ್ತು ಸೊಸೆ 35 ವರ್ಷದ ಜಿಂದಾಲ್ ಮೋದಿ ಹಾಗೂ ಮೊಮ್ಮಗ 6 ವರ್ಷ ಮೇನತ್ ಮೇಹುಲ್ ಮೋದಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಜೊತೆಗೆ ಚಾಲಕ ಸತ್ಯನಾರಾಯಣ ಸಹ ಇದ್ದರು. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಈ ಘಟನೆಯಲ್ಲಿ ಎಲ್ಲರೂ ಗಾಯಗೊಂಡಿದ್ದು, ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಹ್ಲಾದ್ ಮೋದಿ ಅವರ ಗಲ್ಲದ ಭಾಗಕ್ಕೆ ಪೆಟ್ಟು ಬಿದ್ದಿದೆ. ಮಗ, ಸೊಸೆ ಮತ್ತು ಮೊಮ್ಮಗ ಮತ್ತು ಚಾಲಕ ಸತ್ಯನಾರಾಯಣ ಅವರಿಗೂ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.