ಮೈಸೂರು: ಮಾರ್ಚ್ 12ರಂದು ಬೆಂಗಳೂರು-ಮೈಸೂರು ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಒಟ್ಟು 2 ಕಿಲೋ ಮೀಟರ್ ರೋಡ್ ಶೋ ನಡೆಸಲು ಉದ್ದೇಶಿಸಿದ್ದೇವೆ. ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಬೃಹತ್ ಸಮಾವೇಶ ನಡೆಯುತ್ತದೆ ಎಂದರು. ಎಸ್ಪಿಜಿ ಅನುಮತಿ ಕೊಟ್ಟರೆ ಹೈವೇಯಲ್ಲಿ ರೋಡ್ ಶೋ ಮಾಡ್ತೇವೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೇ ನಿರ್ಮಾಣ ಮಾಡಲಾಗಿದೆ, ಟೋಲ್ ಸಂಗ್ರಹವನ್ನು ಮಾರ್ಚ್ 14ರವರೆಗೆ ಮುಂದೂಡಿದ್ದೇವೆ. ಬೆಂಗಳೂರು-ನಿಡಘಟ್ಟವರೆಗೂ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ನಡುವಿನ ಹೈವೇಯಲ್ಲಿ ಚನ್ನಪಟ್ಟಣದ ಬಳಿ 30 ಎಕರೆಯಲ್ಲಿ ಐಲ್ಯಾಂಡ್ ರೂಪದಲ್ಲಿ ರೆಸ್ಟ್ ಏರಿಯಾ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಿಂದ ನಿಡಘಟ್ಟವರೆಗಿನ 56-ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಸುವ ವಾಹನಗಳ ಟೋಲ್ ದರಗಳ ಮಾಹಿತಿಯನ್ನು NHAI ಅಧಿಕಾರಿಗಳು ತಿಳಿಸಿದ್ದಾರೆ.