ಯಾದಗಿರಿ : ನಾವು ಎಂದಿಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿಟ್ಟು ರಾಜಕಾರಣ ಮಾಡುತ್ತೇವೆ. ಯಾದರಿಗಿ ಸಹಿತವಾಗಿ ದೇಶದ ನೂರಾರು ಇಂಥ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಇಂದು ಸುಮಾರು ₹ 10,000 ಕೋಟಿ ಮೌಲ್ಯದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಯಾದರಿಗಿಯಲ್ಲಿ ಮಕ್ಕಳ ಪೌಷ್ಟಿಕತೆ ವರ್ಧಿಸಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಸೇವೆ ಸಿಗುತ್ತಿದೆ. ಶಿಕ್ಷಣ, ಆರೋಗ್ಯ, ಸಂಪರ್ಕದಲ್ಲಿ ಯಾದಗಿರಿಯು ಇಂದು ಟಾಪ್-10 ಆಕಾಂಕ್ಷಿ ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. ಈ ಸಾಧನೆಗಾಗಿ ಯಾದಗಿರಿಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಶ್ಲಾಘಿಸುತ್ತೇನೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗುತ್ತಿರುವ ಕೆಲಸಗಳು ಶ್ಲಾಘನೀಯ. ಇದಕ್ಕಾಗಿ ಬೊಮ್ಮಾಯಿ ಮತ್ತು ಅವರ ಸಚಿವರನ್ನು ಅಭಿನಂದಿಸುತ್ತೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಮುಂದಿನ 25 ವರ್ಷಗಳ ಕನಸು ಹೊತ್ತು ನಾವು ಮುನ್ನಡೆಯುತ್ತಿದ್ದೇವೆ. ಇದು ನಮಗೆಲ್ಲರಿಗೂ ಅಮೃತ ಕಾಲ. ಈ ಅಮೃತ ಕಾಲದಲ್ಲಿ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿಂದು ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ನಾರಾಯಣಪುರ ಎಡದಂಡೆ ಯೋಜನೆಯ ವಿಸ್ತರಣೆ, ಆಧುನೀಕರಣಗೊಳಿಸಲಾಗಿದೆ. ಇದರಿಂದ ಮೂರು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೇರ ಲಾಭವಾಗಲಿದೆ. ಯಾದರಿಗಿಯ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದರು.