ಹುಬ್ಬಳ್ಳಿ: ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮೋದಿಯವರು ಮಾರ್ಗಮಧ್ಯೆ ಪ್ರಧಾನಿ ಎರಡ್ಮೂರು ಕಡೆ ವಾಹನ ನಿಲುಗಡೆ ಮಾಡಿ ಜನರನ್ನು ಮಾತನಾಡಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಯುವಜನೋತ್ಸವದಲ್ಲಿ ಮೋದಿ ರೋಡ್ ಶೋ ಇಲ್ಲ, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ 8 ಕಿ.ಮೀ. ರಸ್ತೆ ಮಾರ್ಗದ ಮೂಲಕ ವಾಹನದಲ್ಲಿ ಪ್ರಧಾನಿ ಮೋದಿ ತೆರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು, ರಾಷ್ಟ್ರೀಯ ಯುವ ಜನೋತ್ಸವಕ್ಕೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಸ್ಪಷ್ಟಪಪಡಿಸಿದರು.
ಇನ್ನೂ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, 7,500 ಪ್ರತಿನಿಧಿಗಳು ಸೇರಿ 40 ಸಾವಿರಕ್ಕೂ ಅಧಿಕ ಯುವ ಸಮೂಹ ಪಾಲ್ಗೊಳ್ಳಲಿದೆ, ಇನ್ನೂ ಯುವ ಜನೋತ್ಸವ ಉದ್ಘಾಟನಾ ಸಮಾರಂಭ ಬರೋಬ್ಬರಿ ಒಂದೂವರೆ ತಾಸಿನ ಕಾರ್ಯಕ್ರಮ. ಪ್ರಧಾನಿ ಮೋದಿ 30 ರಿಂದ 40 ನಿಮಿಷ ಭಾಷಣ ಮಾಡಲಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 40 ಸಾವಿರದವರೆಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಅಲ್ಲಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ಇಡೀ ನಗರವನ್ನು ಸಿಂಗರಿಸಲಾಗಿದೆ.
ಅಲ್ಲಲ್ಲಿ ಬಿಜೆಪಿ ಮುಖಂಡರ ಕಟೌಟ್, ಮೋದಿ ಹಾಗೂ ವಿವೇಕಾನಂದರ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ ಮೋದಿ ಅಭಿಮಾನಿಗಳು ಸೇರಿ ಬೇರೆ ಬೇರೆ ಊರುಗಳಿಂದ ಜನರು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.