Wednesday, March 22, 2023
spot_img
- Advertisement -spot_img

ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಿ

ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಪ್ರಕ್ರಿಯೆಗಳನ್ನು ಕೇಂದ್ರ ಚುನಾವಣಾ ಆಯೋಗವು ಪ್ರಾರಂಭಿಸಿದ್ದು, ಚುನಾವಣೆಗೆ ನೇರವಾಗಿ ಸಂಬಂಧಪಡುವ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಚುನಾವಣೆಯನ್ನು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಬೇಕಿರುವ ಹಿನ್ನೆಲೆಯಲ್ಲಿ ನೇರವಾಗಿ ಚುನಾವಣೆಗೆ ಸಂಬಂಧಪಡುವ ಅಧಿಕಾರಿಗಳನ್ನು ತವರು ಜಿಲ್ಲೆಗೆ ನಿಯೋಜನೆ ಮಾಡುವಂತಿಲ್ಲ ಮತ್ತು ಒಂದೇ ಸ್ಥಳದಲ್ಲಿ ಮೂರು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ಒಂದು ವೇಳೆ ಒಂದೇ ಸ್ಥಳದಲ್ಲಿ ಅಧಿಕಾರಿಗಳನ್ನು ಮುಂದುವರಿಸಬೇಕಾದರೆ ಮತ್ತು ಅಧಿಕಾರಿಗಳನ್ನು ತವರು ಜಿಲ್ಲೆಗೆ ನಿಯೋಜನೆ ಮಾಡಬೇಕಾದರೆ ಸಮರ್ಪಕವಾದ ಸ್ಪಷ್ಟನೆಯನ್ನು ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಆಯೋಗಕ್ಕೆ ಸ್ಪಷ್ಟವಾಗಿ ತಿಳಿಸಬೇಕು. ಚುನಾವಣೆಗೆ ಸಂಬಂಧಪಡದ ಸಿಬ್ಬಂದಿಯ ವರ್ಗಾವಣೆ, ನಿಯೋಜನೆಗೆ ಆಯೋಗದಿಂದ ಯಾವುದೇ ತಕರಾರು ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಸರ್ಕಾರದ ಆಡಳಿತ ಯಂತ್ರಕ್ಕೆ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗದಂತೆ ವರ್ಗಾವಣೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಪ್ರಧಾನ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮತ್ತು ವೈದ್ಯರು, ಶಿಕ್ಷಕರು ಅವರಂತಹ ಸರ್ಕಾರಿ ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಪಾತ ಮಾಡುವಂತಹ ಅಧಿಕಾರಿ ವಿರುದ್ಧ ದೂರುಗಳಿದ್ದರೆ ಅಂತಹವರನ್ನು ಚುನಾವಣೆ ಕಾರ್ಯಕ್ಕೆ ನಿಯೋಜನೆ ಮಾಡುವ ಅಗತ್ಯ ಇಲ್ಲ. ಪ್ರಸ್ತುತ ಕಾರ್ಯಾವಧಿಯಲ್ಲಿರುವ ರಾಜ್ಯ ವಿಧಾನಸಭೆಯ ಅವಧಿಯು 2023ರ ಮೇ 24ಕ್ಕೆ ಮುಕ್ತಾಯಗೊಳ್ಳಲಿದೆ.

Related Articles

- Advertisement -

Latest Articles