ಮಂಡ್ಯ: ಕಾಂಗ್ರೆಸ್‌ನವರು ನನ್ನ ಸಮಾಧಿಯ ಕನಸು ಕಾಣುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಡ್ಯ ಜಿಲ್ಲೆಯಲ್ಲಿ ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟಿಸಿ ಸಮಾವೇಶದಲ್ಲಿ ಮಾತನಾಡಿ, ಬಡವರನ್ನು ಲೂಟಿ ಮಾಡುವ ಸರ್ಕಾರವನ್ನು ಕಿತ್ತೊಗೆಯಲಾಗಿದೆ ಅಭಿವೃದ್ಧಿಗಾಗಿ ಡಬಲ್ ಎಂಜಿನ್ ಸರ್ಕಾರ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ನವರಿಗೆ ನನ್ನ ಸಮಾಧಿ ಚಿಂತೆ, ನನಗೆ ಅಭಿವೃದ್ಧಿ ಚಿಂತೆ ಎಂದಿದ್ದಾರೆ. ಈ ದೇಶದ ಕೋಟಿ ತಾಯಂದಿರ, ಜನ ಆಶೀರ್ವಾದ ಮೋದಿಯ ರಕ್ಷಾಕವಚವಾಗಿ ನಿಂತಿದೆ , ಇದು ನನ್ನನ್ನು ವಿರೋಧಿಸುವವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ನಿರ್ಮಾಣವಾದ ಆಧುನಿಕ ಎಕ್ಸ್‌ಪ್ರೆಸ್ ವೇ ದೇಶದ ವಿವಿಧೆಡೆಗಳಲ್ಲಿ ಆಗಬೇಕೆಂಬುದು ದೇಶವಾಸಿಗಳ ಹೆಬ್ಬಯಕೆಯಾಗಿದೆ. ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರಂತಹ ಮಹಾನ್ ವ್ಯಕ್ತಿಗಳನ್ನು ದೇಶಕ್ಕೆ ನೀಡಿದ ಪುಣ್ಯಭೂಮಿ ಇದು. ಅವರ ಪ್ರೇರಣೆಯೇ ಅಭಿವೃದ್ದಿಯ ದೂರದರ್ಶಿತ್ವಕ್ಕೆ ಕನ್ನಡಿಯಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರ ಅಭಿವೃದ್ದಿಗಾಗಿ ಬಳಸಬೇಕಾದ ಹಣವನ್ನು ಲೂಟಿ ಮಾಡಿತ್ತು. ಆದರೆ ಆನಂತರ ಬಡವರ ಕಷ್ಟ ಅರಿತ ಸರ್ಕಾರ ಬಂದ ಕಾರಣ ಪ್ರತಿ ಬಡವನ ಮನೆಯಲ್ಲಿ ನಗು ಅರಳುತ್ತಿದೆ ಎಂದರು. ಎಕ್ಸ್‌ಪ್ರೆಸ್ ವೇಯೊಂದಿಗೆ ಇಲ್ಲಿನ ಅಭಿವೃದ್ದಿಯ ವೇಗವೂ ಹೆಚ್ಚಲಿದೆ. ಪ್ರವಾಸೋದ್ಯಮವೂ ಹೊಸತನ ಪಡೆಯಲಿದೆ ಎಂದು ತಿಳಿಸಿದರು.